ಕಾರವಾರ: ಕಾಲೇಜು ಯುವತಿ ಜೊತೆ ದೇವಾಲಯದ ಒಳಗೆ ಚಕ್ಕಂದವಾಡುತ್ತಿದ್ದ KSRTC ಬಸ್ಸು ಚಾಲಕನಿಗೆ ಊರಿನ ಜನ ಲತ್ತೆ ಹಾಕಿದ್ದಾರೆ. ಚಾಲಕ ಹಾಗೂ ಯುವತಿ ಸೇರಿ `ತಪ್ಪಾಯ್ತು.. ಇನ್ಮುಂದೆ ಇಲ್ಲಿ ಬರಲ್ಲ’ ಎಂದು ಬೇಡಿಕೊಳ್ಳುವ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ!
ವೀರಣ್ಣ ಎಂಬ ಕೆಎಸ್ಆರ್ಟಿಸಿ ಚಾಲಕ ಶ್ವೇತಾ ಎಂಬ ಕಾಲೇಜು ಯುವತಿ ಜೊತೆ (ಜೋಡಿ ಹೆಸರು ಬದಲಿಸಿದೆ) ಸವಿತಾ ಹೊಟೇಲ್ ಪಕ್ಕದಲ್ಲಿನ ದೇವಾಲಯದಲ್ಲಿ `ನಾನು ರಾಧೆ.. ನೀನು ಕೃಷ್ಣ’ ಎನ್ನುತ್ತ ಸರಸ ಸಲ್ಲಾಪದಲ್ಲಿ ತೊಡಗಿದ್ದರು. ಈ ಜೋಡಿ ದೇವಾಲಯದ ಒಳಗೆ ಪ್ರವೇಶಿಸಿದಾಗ ಅಲ್ಲಿ ಅರ್ಚಕರು ಇರಲಿಲ್ಲ. ಹೀಗಾಗಿ ಆ ಇಬ್ಬರು ಏಕಾಂತದಲ್ಲಿದ್ದರು.
ಇದನ್ನು ನೋಡಿದ ಕೆಲವರು ದೇವಾಲಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ಆಡಳಿತ ಮಂಡಳಿಯವರು ಬಂದು ಆ ಇಬ್ಬರನ್ನು ತರಾಠೆಗೆ ತೆಗೆದುಕೊಂಡರು. ಈ ವೇಳೆ ಸಿಟ್ಟಿಗೆದ್ದ ಕೆಲವರು ಚಾಲಕನಿಗೆ ಎರಡು ಏಟು ಬಿಟ್ಟರು. “ನಾನು ಡಿಪಾರ್ಟಮೆಂಟಿನವ. ಯುನಿಪಾರಂ ನೋಡಿ’ ಎಂದು ಚಾಲಕ ಹೇಳಿದಾಗ ಮತ್ತೆರಡು ಪೆಟ್ಟು ಹೆಚ್ಚುವರಿಯಾಗಿ ಬಿದ್ದಿತು!
ಇನ್ನಷ್ಟು ಜನ ಸೇರುವುದನ್ನು ನೋಡಿದ ಕಾಲೇಜು ವಿದ್ಯಾರ್ಥಿನಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಆಗ ಅಲ್ಲಿಗೆ ಬಂದವರು ದೇವಾಲಯದ ಗೇಟು ಹಾಕಿದರು. ಇಬ್ಬರು ಒಟ್ಟಿಗಿರುವ ವಿಡಿಯೋ ಮಾಡಿ `ಪಾಲಕರಿಗೆ ತಲುಪುವವರಿಗೂ ಶೇರ್ ಮಾಡಿ’ ಎಂದು ಹರಿಬಿಟ್ಟರು.
ಕೊನೆಗೆ `ಪೊಲೀಸರನ್ನು ಕರೆಯಿಸುತ್ತೇನೆ’ ಎಂದಾಗ ಆ ಇಬ್ಬರು ಸೇರಿ ಕೈ ಮುಗಿದರು. ಕಾಲೇಜು ವಿದ್ಯಾರ್ಥಿನಿ `ತಮ್ಮನ್ನು ಬಿಟ್ಟುಬಿಡಿ’ ಎಂದು ದುಂಬಾಲು ಬಿದ್ದಾಗ ಅಲ್ಲಿದ್ದವರ ಮನಸ್ಸು ಕರಗಿತು. ಕೊನೆಗೆ `ಮತ್ತೆ ಹೀಗೆ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿ, ಅಲ್ಲಿಂದ ಇಬ್ಬರನ್ನು ಬೀಳ್ಕೊಟ್ಟರು. `ಚಾಲಕ ಹಾಗೂ ಆ ವಿದ್ಯಾರ್ಥಿನಿ ನಡುವೆ ಸುಮಾರು 15 ವರ್ಷ ವಯಸ್ಸಿನ ಅಂತರವಿದ್ದು, ಚಾಲಕನನ್ನು ಬೇರೆ ಕಡೆ ವರ್ಗಾಯಿಸಬೇಕು’ ಎಂದು ಅಲ್ಲಿದ್ದವರು ಆಗ್ರಹಿಸಿದರು. ಆದರೆ, ಈ ಆಗ್ರಹ ನಿಗಮಕ್ಕೆ ಕೇಳಲಿಲ್ಲ!