SSLC ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಐಎಎಸ್ ಅಧಿಕಾರಿಗಳಿಂದ ಮಕ್ಕಳಿಗೆ ಪಾಠ ಮಾಡುವ ಯೋಜನೆ ರೂಪಿಸಿದೆ.
ಈ ಹಿನ್ನಲೆ ಸೋಮವಾರ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಕಾರವಾರದ ಶಿರವಾಡದಲ್ಲಿನ ಸರ್ಕಾರಿ ಪ್ರೌಢಶಾಲೆಗೆ ತೆರಳಿ ಪಾಠ ಮಾಡಿದರು. 10ನೇ ತರಗತಿಗೆ ಪ್ರವೇಶಿಸಿದ ಅವರನ್ನು ಅಲ್ಲಿನ ಮಕ್ಕಳು ಅದ್ಧೂರಿಯಾಗಿ ಬರಮಾಡಿಕೊಂಡರು. ಮಕ್ಕಳ ಜೊತೆ ಬೆರೆತ ಲಕ್ಷ್ಮೀಪ್ರಿಯಾ ವಿವಿಧ ವಿಷಯಗಳ ಕುರಿತು ಮಾತನಾಡಿದರು.
SSLC ಪರೀಕ್ಷೆ ಮಹತ್ವ, ಪರೀಕ್ಷೆಯ ಪೂರ್ವ ತಯಾರಿ ಹಾಗೂ ಸಮಯ ಪಾಲನೆ ವಿಷಯವಾಗಿ ಅವರು ಮಕ್ಕಳಿಗೆ ತಿಳುವಳಿಕೆ ನೀಡಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೂ ಅವರು ಉತ್ತರಿಸಿದರು. `ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ‘ ಎಂದು ಅವರು ಧೈರ್ಯ ತುಂಬಿದರು. `ಮಕ್ಕಳ ಮನಸ್ಸು ಹಾಳು ಮಾಡುವ ಮೊಬೈಲ್, ಟಿವಿಯಿಂದ ವಿದ್ಯಾರ್ಥಿಗಳು ದೂರವಿರಬೇಕು. ಯಶಸ್ಸು ಸಾಧಿಸುವ ಗುರಿ ಮಾತ್ರ ನಿಮ್ಮ ಮುಂದಿರಬೇಕು’ ಎಂದು ಕಿವಿಮಾತು ಹೇಳಿದರು. `ಶಿಸ್ತುಬದ್ಧವಾಗಿ ಅಧ್ಯಯನ ಮಾಡುವ ಮೂಲಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ’ ಎಂದರು.
ಕೆಲ ದಿನಗಳ ಹಿಂದೆ ಉತ್ತರ ಕನ್ನಡ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದು ಸಹ ಶಾಲೆಯೊಂದಕ್ಕೆ ಭೇಟಿ ನೀಡಿ ಪಾಠ ಮಾಡಿದ್ದರು. ಜಿಲ್ಲೆಯಲ್ಲಿರುವ ಇನ್ನಿತರ ಹಿರಿಯ ಅಧಿಕಾರಿಗಳು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಜೊತೆ ಸಂವಾದ ನಡೆಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವುದರ ಜೊತೆ ಪರೀಕ್ಷೆ ಕುರಿತು ಅವರಲ್ಲಿನ ಭಯ ಹೋಗಲಾಡಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ.