ವಿವಿಧ ಯೋಜನೆ ಅನುಷ್ಠಾನ ಹಾಗೂ ಭೂಮಿಯ ನಿಖರ ಅಳತೆಗಾಗಿ ಸರ್ಕಾರ ಡ್ರೋಣ್ ಮೂಲಕ ಸರ್ವೇ ಕಾರ್ಯ ನಡೆಸುತ್ತಿದೆ. ಈ ಸರ್ವೇ ಕೆಲಸ ಇದೀಗ ಶಿರಸಿಯ ಉಂಚಳ್ಳಿಯವರೆಗೆ ತಲುಪಿದೆ.
ಭೂ ದಾಖಲೆಗಳ ಇಲಾಖೆ ಹಾಗೂ ಕೇಂದ್ರ ಸಂರಕ್ಷಣಾ ಇಲಾಖೆ ಸಹಯೋಗದಲ್ಲಿ ಸರ್ವೇ ನಡೆಯುತ್ತಿದೆ. 4-5 ಸಿಬ್ಬಂದಿ ಡ್ರೋಣ್ ಜೊತೆ ವಿವಿಧ ಊರುಗಳಲ್ಲಿ ಸಂಚರಿಸುತ್ತಿದ್ದಾರೆ. ಬನವಾಸಿ ಭಾಗದಲ್ಲಿ ಈಗಾಗಲೇ ಒಂದು ಹಂತದ ಸರ್ವೇ ಕಾರ್ಯ ಮುಕ್ತಾಯವಾಗಿದೆ. ಸರಿ ಸುಮಾರು 120ಮೀ ಎತ್ತರದಲ್ಲಿ ಡ್ರೋಣ್ ಹಾರಾಟ ನಡೆಯುತ್ತಿದೆ.
ಎಡಿಎಲ್ಆರ್ ರಾಜಶೇಖರ, ಮೇಲ್ವಿಚಾರಕ ಕಿರಣಕುಮಾರ ಜೊತೆ ಹೈದರಾಬಾದಿನಿಂದ ಬಂದ ಡ್ರೋಣ್ ತಜ್ಞರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಡ್ರೋಣ್ ಹಾರಾಟ ನೋಡಿದ ಜನ ಆತಂಕಕ್ಕೆ ಒಳಗಾಗಿದ್ದು, `ಇದು ಸರ್ಕಾರಿ ಕೆಲಸ. ಆತಂಕ ಬೇಡ’ ಎಂದು ಅಧಿಕಾರಿಗಳು ಸಮಜಾಯಿಶಿ ನೀಡುತ್ತಿದ್ದಾರೆ.
ಕೆಲ ಮುಖ್ಯ ರಸ್ತೆಗಳ ಮೇಲೆ ಕೆಂಪು-ಬಿಳಿ ಬಣ್ಣ ಬಡಿದು ಸರ್ವೇ ಕೆಲಸ ನಡೆದಿದೆ. ರಸ್ತೆ ಮೇಲೆ ವಿಚಿತ್ರ ಬಣ್ಣದ ಚಿಹ್ನೆ ನೋಡಿದ ಜನ ವಿವಿಧ ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೂ ಅಧಿಕಾರಿಗಳು ಸಮಾಧಾನದಿಂದ ಉತ್ತರಿಸಿದ್ದಾರೆ. ಡ್ರೋಣ್ ಸರ್ವೇ ಜೊತೆ ಹಳೆಯ ಶೈಲಿಯಲ್ಲಿ ಟೇಪ್ ಸರ್ವೇ ಸಹ ನಡೆಯುತ್ತಿದ್ದು, ಎರಡು ಸರ್ವೇಯ ನಡುವೆ ತುಲನೆ ಮಾಡಲಾಗುತ್ತಿದೆ.