ಕುಮಟಾ: ಸಂಧ್ಯಾ ಸುರಕ್ಷಾ ಯೋಜನೆ ಅಡಿ ಮಾಸಾಶನ ಪಡೆಯಲು ನೀಲಾವತಿ ನಾಯ್ಕ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ.
ವಿಧವಾ ವೇತನ ದೊರೆಯುತ್ತಿದ್ದ ಕಾರಣ ಅವರಿಗೆ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ `ವಿಧವಾ ವೇತನ ರದ್ಧುಗೊಳಿಸಿ’ ಎಂದು ಅವರು ಮಾರ್ಚ ಮಾಸದಲ್ಲಿ ಅರ್ಜಿ ಸಲ್ಲಿಸಿದ್ದರು. ಸಾಕಷ್ಟು ಅಲೆದಾಟ ನಡೆಸಿದರೂ ವಿಧವಾ ವೇತನ ರದ್ದಾಗಿರಲಿಲ್ಲ. ಪ್ರಸ್ತುತ ಏಳು ತಿಂಗಳದ ಹೋರಾಟದ ನಂತರ ವಿಧವಾ ವೇತನ ರದ್ದಾಗಿದ್ದು, ಅವರು ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವ ಅರ್ಹತೆ ಪಡೆದಿದ್ದಾರೆ.
ತಮಗಾದ ಅನ್ಯಾಯದ ವಿರುದ್ಧ ನೀಲಾವತಿ ನಾಯ್ಕ ಅವರು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರಿಗೆ ತಿಳಿಸಿದ್ದರು. ಅಲ್ಲಿನ ಆಗ್ನೇಲ್ ರೋಡ್ರಿಗಸ್ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಮಾಧ್ಯಮಗಳ ಗಮನ ಸೆಳೆದಿದ್ದರು. `ಜಿಲ್ಲಾಡಳಿತಕ್ಕೆ ದೂರು ಸಲ್ಲಿಕೆಯಾದ ಐದು ದಿನದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ವೃದ್ಧೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮಾಧ್ಯಮ ವರದಿಗಳು ಅವರಿಗೆ ನೆರವಾಗಿದ್ದು, ಎಲ್ಲರಿಗೂ ಕೃತಜ್ಞತೆ’ ಎಂದು ಆಗ್ನೇಲ್ ರೋಡ್ರಿಗಸ್ ಹೇಳಿದ್ದಾರೆ.