ರಾತ್ರಿ ವೇಳೆ ಬೈಕ್ ಓಡಿಸಿಕೊಂಡು ಅಜ್ಜಿಮನೆಗೆ ಹೊರಟ ಅಡ್ಲೂರಿನ ವಿನೋದ ನಾಯ್ಕ ಅಲಗೇರಿ ಸ್ಮಶಾನದ ಮುಂದೆ ಬಿದ್ದು ಸಾವನಪ್ಪಿದ್ದಾರೆ.
ಅಂಕೋಲಾ ತಾಲೂಕಿನ ಅಗಸೂರು ಬಳಿಯ ಅಡ್ಲೂರಿನಲ್ಲಿ ವಿನೋದ ಪೊಕ್ಕ ನಾಯ್ಕ (38) ವಾಸವಾಗಿದ್ದರು. ಅವರು ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದರು. ಫೆ 19ರ ರಾತ್ರಿ ಅಲಗೇರಿಯ ಅಜ್ಜಿಮನೆಗೆ ಹೋಗುವುದಕ್ಕಾಗಿ ಬೈಕ್ ಚಾಲು ಮಾಡಿದ್ದರು. ಬಾಳೆಗುಳಿ ಕ್ರಾಸಿನ ಬಳಿ ಬರುತ್ತಿದ್ದ ಅವರಿಗೆ ಅಲಗೇರಿ ಸ್ಮಶಾನದ ಬಳಿ ನಾಯಿಯೊಂದು ಅಡ್ಡ ಬಂದಿತು.
ಬೈಕಿಗೆ ಅಡ್ಡ ಬಂದ ನಾಯಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅವರು ನೆಲಕ್ಕೆ ಬಿದ್ದರು. ವಿನೋದ ನಾಯ್ಕರ ಮೇಲೆ ಬೈಕ್ ಸಹ ಬಿದ್ದಿದ್ದರಿಂದ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಈ ಅಪಘಾತ ನೋಡಿದವರು ವಿನೋದ ನಾಯ್ಕರನ್ನು ರಕ್ಷಿಸುವ ಪ್ರಯತ್ನ ಮಾಡಿದರು. ಗಾಯಾಳುವನ್ನು ಅಂಕೋಲಾ ಆಸ್ಪತ್ರೆಗೆ ರವಾನಿಸಿದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಸಹ ಹೆಚ್ಚಿನ ಚಿಕಿತ್ಸೆ ಅಗತ್ಯ ಎಂದು ಉಡುಪಿ ಮಣಿಪಾಲ್ ಆಸ್ಪತ್ರೆಗೆ ಶಿಫಾರಸ್ಸು ಮಾಡಿದರು.
ಅದರ ಪ್ರಕಾರ ವಿನೋದ ನಾಯ್ಕ ಅವರ ಕುಟುಂಬದವರು ಗಾಯಾಳುವನ್ನು ಉಡುಪಿಗೆ ಕರೆದೊಯ್ದರು. ಆದರೆ, ಅಲ್ಲಿನ ವೈದ್ಯರು `ವಿನೋದ ನಾಯ್ಕ ಬದುಕುವುದು ಕಷ್ಟ’ ಎಂದು ಹೇಳಿದರು. ಹೀಗಾಗಿ ಅನಿವಾರ್ಯವಾಗಿ ಅವರನ್ನು ಅಂಕೋಲಾ ಆಸ್ಪತ್ರೆಗೆ ಆರೈಕೆಗಾಗಿ ಕರೆತರಲಾಯಿತು. ಆದರೆ, ಅಷ್ಟರೊಳಗೆ ವಿನೋದ ನಾಯ್ಕ ಸಾವನಪ್ಪಿದ್ದರು. ಅಂಕೋಲಾದ ವೈದ್ಯರು ಸಹ ವಿನೋದ ನಾಯ್ಕರ ಸಾವನ್ನು ದೃಢೀಕರಿಸಿದರು. ವಿನೋದ ನಾಯ್ಕರ ಸಹೋದರ ದಾಮೋದರ ನಾಯ್ಕ ಪೊಲೀಸ್ ಪ್ರಕರಣ ದಾಖಲಿಸಿ ಶವ ಪಡೆದರು.