`ಗ್ಯಾರಂಟಿ ಯೋಜನೆ ನಮಗೆ ಅಗತ್ಯವಿಲ್ಲ’ ಎಂದು ಉತ್ತರ ಕನ್ನಡ ಜಿಲ್ಲೆಯ 1970 ಜನ ಹೇಳಿದ್ದಾರೆ. ಈ ಬಗ್ಗೆ ಅವರು ಅಧಿಕೃತ ಪತ್ರವನ್ನು ಸರ್ಕಾರಕ್ಕೆ ನೀಡಿದ್ದಾರೆ.
ಕುಮಟಾದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ಜಿಲ್ಲಾಧ್ಯಕ್ಷ ಸತೀಶ ನಾಯ್ಕ ಶನಿವಾರ ಸಭೆ ನಡೆಸಿದರು. `ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆ ಯಶಸ್ವಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 95ಕ್ಕೂ ಅಧಿಕ ಪ್ರಮಾಣದಲ್ಲಿ ಅನುಷ್ಠಾನ ನಡೆದಿದೆ’ ಎಂದವರು ಹೆಮ್ಮೆಯಿಂದ ಹೇಳಿದರು. `ಉತ್ತರ ಕನ್ನಡ ಜಿಲ್ಲೆ ಗ್ಯಾರಂಟಿ ಅನುಷ್ಠಾನ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ’ ಎಂದವರು ತಿಳಿಸಿದರು.
`ಭ್ರಷ್ಟಾಚಾರರಹಿತವಾಗಿ ಗ್ಯಾರಂಟಿ ಯೋಜನೆ ಅನುಷ್ಠಾನ ನಡೆದಿದೆ. ನೇರವಾಗಿ ಫಲಾನುಭವಿಗಳಿಗೆ ಈ ಹಣ ಸಿಗುತ್ತದೆ. ಶಕ್ತಿ ಯೋಜನೆಯಿಂದ 11.20 ಕೋಟಿ ಮಹಿಳೆಯರು ಬಸ್ ಪ್ರಯಾಣ ಮಾಡಿದ್ದಾರೆ. ಅವರಿಗಾಗಿ 322.40 ಕೋಟಿ ರೂ ವೆಚ್ಚ ಮಾಡಲಾಗಿದೆ. ಯುವ ನಿಧಿ ಯೋಜನೆಗೆ ನೋಂದಣಿ ಮಾಡಿಕೊಂಡ 6,400 ಅರ್ಜಿದಾರರಲ್ಲಿ 4469 ಜನರಿಗೆ 8 ಕೋಟಿ ರೂ ಪಾವತಿಯಾಗಿದೆ’ ಎಂಬ ಮಾಹಿತಿಯನ್ನು ಅವರು ನೀಡಿದರು.
`ಗೃಹಜ್ಯೋತಿ ಯೋಜನೆಯಡಿ 3.89 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗಿದೆ. ಅನ್ನ ಭಾಗ್ಯ ಯೋಜನೆಯಡಿ 12.96 ಲಕ್ಷ ಟನ್ ಅಕ್ಕಿ ಸರಬರಾಜು ಮಾಡಲಾಗಿದೆ’ ಎಂಬ ಲೆಕ್ಕಾಚಾರವನ್ನು ಅವರು ಒಪ್ಪಿಸಿದರು.
ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಕುಮಟಾ ತಾಲೂಕು ಅಧ್ಯಕ್ಷ ಅಶೋಕ ಗೌಡ, ಸದಸ್ಯರಾದ ಈಶ್ವರ ನಾಯ್ಕ, ಬಾಲಕೃಷ್ಣ ನಾಯಕ, ಭವ್ಯ ಗಾವಡಿ, ನಾಗರಾಜ ಹಿತ್ಲಮಕ್ಕಿ, ಹನುಮಂತ ಪಟಗಾರ, ಗೀತಾ ಭಂಡರ್ಕರ್, ರವಿ ಪಟಗಾರ, ನಾರಾಯಣ ಉಪ್ಪಾರ್, ಕಾರವಾರದ ರಾಜೇಂದ್ರ ರಾಣೆ, ರಮೇಶ ನಾಯ್ಕ, ಅಬು ಮಹಮ್ಮದ್, ಶಂಭು ನಾಯ್ಕ, ಅನಂತ ನಾಯಕ ಇದ್ದರು.