ಹಳಿಯಾಳ: ದೇಶಪಾಂಡೆ ನಗರದ ಶಿವಾಜಿ ವೃತ್ತದಲ್ಲಿ ಸುನೀಲ ಗಿರಿ (25 ವರ್ಷ) ಎಂಬಾತ ಹುಚ್ಚನಂತೆ ವರ್ತಿಸಿ, ಜನರಿಗೆ ಕೆಟ್ಟದಾಗಿ ಬೈಯುತ್ತಿರುವುದನ್ನು ನೋಡಿದ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ.
ದೇಶಪಾಂಡೆ ನಗರದಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಸುನೀಲ ಗಿರಿ ಜುಲೈ 14ರ ಸಂಜೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬನೇ ನಗಾಡುತ್ತಿದ್ದ. ನಂತರ ಕಂಡ ಕಂಡವರಿಗೆ ಬೈಯ್ಯುಲು ಶುರು ಮಾಡಿದ್ದ. ಗಸ್ತು ತಿರುಗುತ್ತಿದ್ದ ಪೊಲೀಸರು ಆತನ ಗಲಾಟೆ ನೋಡಿ ವಿಚಾರಣೆ ನಡೆಸಿದರು. ಪೊಲೀಸರ ಬಳಿಯೂ ಆತ ಅನುಚಿತವಾಗಿ ವರ್ತಿಸಿದ್ದು, ಪಿಸೈ ಅಮೀನಸಾಬ್ ಅತ್ತಾರ್ ಆತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಇದೀಗ ಆತ ಗಾಂಜಾ ಸೇವಿಸಿರುವುದು ದೃಢವಾಗಿದೆ.







