ಅಂಕೋಲಾ ತಾಲೂಕಿನ ಕೇಣಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ ಇಲ್ಲಿ ಪ್ರತಿಭಟನೆಗೆ ಯಾವುದೇ ಅವಕಾಶವಿಲ್ಲ. ಅದಾಗಿಯೂ ಮೀನುಗಾರರು ಪ್ರತಿಭಟನೆಗೆ ಪಟ್ಟು ಹಿಡಿದ ಹಿನ್ನಲೆ ಮಾರ್ಚ 12ರಂದು ಬೇಲಿಕೇರಿಯಲ್ಲಿ ಪೊಲೀಸ್ ಭದ್ರತೆಯ ಜೊತೆ ಪ್ರತಿಭಟನೆ ನಡೆಸಲು ಅವಕಾಶ ಕೊಡಲಾಗಿದೆ.
ಪ್ರತಿಭಟನೆಗೂ ಮುನ್ನ ಅನುಮತಿ ಕಡ್ಡಾಯವಾಗಿದ್ದು, ಮುಖಂಡರು 1 ಲಕ್ಷ ರೂ ಮೌಲ್ಯದ ಬಾಂಡ್ ನೀಡಿದ್ದಾರೆ. ಜೊತೆಗೆ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿಯೂ ಬರೆದುಕೊಟ್ಟಿದ್ದಾರೆ. ಹೀಗಾಗಿ ಸರ್ವೇ ಕಾರ್ಯಕ್ಕೆ ಯಾವುದೇ ಆತಂಕ ಎದುರಾಗದಂತೆ ಮುನ್ನಚ್ಚರಿಕೆವಹಿಸಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ. `ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ವಿಚಾರವಾಗಿ ಭದ್ರತೆ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದು, ಸರ್ವೆ ಕಾರ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧ ಪ್ರಕರಣ ದಾಖಲಿಸುವುದು ಅನಿವಾರ್ಯ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಎಚ್ಚರಿಸಿದ್ದಾರೆ. `ಸುಳ್ಳು ಸುದ್ದಿ ಹರಡಿದ ಪರಿಣಾಮ ಮೀನುಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಅವರ ಮನವೊಲೈಕೆಯ ಪ್ರಯತ್ನವೂ ನಡೆಯುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
`ಕಳೆದ 10 ವರ್ಷಗಳ ಹಿಂದೆಯೇ ಬಂದರು ನಿರ್ಮಾಣದ ಬಗ್ಗೆ ರೂಪುರೇಷೆ ನಡೆಸಲಾಗಿದೆ. ಇನ್ವಸ್ಟ್ ಕರ್ನಾಟಕ ಯೋಜನೆ ಅಡಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈ ಯೋಜನೆಯ ಚರ್ಚೆ ನಡೆದಿದೆ. ಬಂದರು ನಿರ್ಮಾಣದ ಸಾಧ್ಯತೆ ಕುರಿತು ಗುತ್ತಿಗೆ ಪಡೆದಿರುವ ಜೆಎಸ್ಡಬ್ಲೂ ಕಂಪೆನಿ 460 ಎಕರೆ ಪ್ರದೇಶದ ಸಮುದ್ರದಲ್ಲಿ ಬಂದರು ಸರ್ವೇ ನಡೆಸಲಿದೆ. ಮೀನುಗಾರರ ಭೂಮಿ ಕಸಿದುಕೊಳ್ಳಲಾಗುತ್ತದೆ ಎಂಬ ವದಂತಿ ಹಬ್ಬಿದ್ದು, ಇಲ್ಲಿ ಯಾವ ಮೀನುಗಾರರ ಭೂಮಿಯೂ ಹೋಗುವುದಿಲ್ಲ’ ಎಂದು ಸ್ಪಷ್ಠಪಡಿಸಿದರು.
`ಸಮುದ್ರದಲ್ಲಿ ನಡೆಯಲಿರುವ ಸರ್ವೇ ಕಾರ್ಯದ ಸಂದರ್ಭದಲ್ಲಿ ಮೀನುಗಾರರು ಬೋಟ್ಗಳ ಮೂಲಕ ಮುತ್ತಿಗೆ ಹಾಕಿ ಅಡ್ಡಿಪಡಿಸುವುದಾಗಿ ಎಚ್ಚರಿಸಿದ್ದಾರೆ. ಸಮುದ್ರ ಸರ್ವೇ ಪ್ರದೇಶದಲ್ಲಿಯೂ ನಿಷೇಧಾಜ್ಞೆ ಜಾರಿಯಲ್ಲಿದ್ದು, ಅಲ್ಲಿ ತೆರಳಲು ಅವಕಾಶವಿಲ್ಲ. ಕೇಣಿ ಗ್ರಾಮದಲ್ಲಿ ಮಾ 15ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಗುಂಪು ಸೇರುವುದು ನಿಯಮಬಾಹಿರ. ಅದಾಗಿಯೂ, ಅಹಿತಕರ ವಿದ್ಯಮಾನ ನಡೆದರೆ ಕಾನೂನುಕ್ರಮ ನಿಶ್ಚಿತ’ ಎಂದು ಎಚ್ಚರಿಸಿದರು.
ಇನ್ನೂ `ಹೊನ್ನಾವರದಲ್ಲೂ ಸರ್ವೆ ಕಾರ್ಯ ನಡೆಸುವ ವೇಳೆ ಮೀನುಗಾರರಿಗೆ ನಿಷೇಧಾಜ್ಞೆ ಕುರಿತು ಮಾಹಿತಿ ನೀಡಲಾಗಿತ್ತು. ಅದಾಗಿಯೂ ಜಾಲತಾಣದಲ್ಲಿನ ಪ್ರಜೋದನೆಗೆ ಒಳಗಾಗಿ ಅನೇಕರು ಪ್ರತಿಭಟನೆ ನಡೆಸಿದರು. ಗ್ರಾಮಸಭೆಯಿಂದಲೂ ದೂರವುಳಿದರು. ನಿಷೇಧಾಜ್ಞೆ ಉಲ್ಲಂಘಿಸಿ ಸಾವಿರಾರು ಜನ ಜಮಾಯಿಸಿದ ಕಾರಣ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗಿದೆ’ ಎಂದು ಮಾಹಿತಿ ನೀಡಿದರು.