ಕೆಳಾಸೆ ಕಾಡಿನ ಸುರೇಶ ಸಿದ್ದಿ ಅವರಿಗಿರುವ ಅರಣ್ಯ ಜ್ಞಾನ ಹಾಗೂ ಕಾಳಜಿ ಬಹುತೇಕ ಅರಣ್ಯ ಅಧಿಕಾರಿ-ಸಿಬ್ಬಂದಿಗೆ ಇಲ್ಲ!
ಅಂಕೋಲಾ-ಯಲ್ಲಾಪುರ ಗಡಿಭಾಗದ ಕೆಳಾಸೆಯಲ್ಲಿ ಸುರೇಶ ಸಿದ್ದಿ ವಾಸವಾಗಿದ್ದಾರೆ. ಮಣ್ಣಿನ ಮನೆಯಲ್ಲಿ ಅವರೇ ತಯಾರಿಸಿದ ಗಣಪತಿ ಮೂರ್ತಿ, ಮನೆ ಮುಂದಿನ ದೈವ ಹಾಗೂ ಒಂದು ನಾಯಿ ಅವರ ಅತಿ ದೊಡ್ಡ ಆಸ್ತಿ. ಇದನ್ನು ಬಿಟ್ಟು ಬಿಡಿಗಾಸು ಅವರ ಬಳಿಯಿಲ್ಲ. ಅವರು ವಾಸಿಸುವ ಮಣ್ಣಿನ ಮನೆಗೆ ಬಾಗಿಲು ಸಹ ಇಲ್ಲ!
ಸುರೇಶ ಸಿದ್ದಿ `ಯಾವ ಮರದಲ್ಲಿ ಯಾವ ಹಕ್ಕಿ ಗೂಡು ಕಟ್ಟಿದೆ ಎಂಬುದರಿ0ದ ಹಿಡಿದು ಯಾವ ಪ್ರಾಣಿ ಈ ಭಾಗದಲ್ಲಿ ಸಂಚಲನ ನಡೆಸಿದೆ’ ಎಂಬುದನ್ನು ಸಹ ಕರಾರುವಕ್ಕಾಗಿ ಹೇಳುವಷ್ಟು ಅಧ್ಯಯನಶೀಲರಾಗಿದ್ದಾರೆ. `ಯಾವ ಬಳ್ಳಿ ವಿಷ. ಯಾವ ಗಿಡ ಔಷಧ’ ಎಂಬುದು ಸುರೇಶ ಸಿದ್ದಿ ಅವರಿಗೆ ಕರಗತ. ಎಂಥ ಬೆಟ್ಟ ಗುಡ್ಡಗಳಿದ್ದರೂ ಬರಿಗಾಲಿನಲ್ಲಿಯೇ ಹತ್ತುತ್ತಾರೆ. ಅದಾಗಿಯೂ ಬೇರೆಯವರು ಮಾಡಿದ ತಪ್ಪಿಗೆ ಸುರೇಶ ಸಿದ್ದಿ ಹೊಡೆತ ತಿನ್ನುವುದು ಮಾಮೂಲು. ಆ ಭಾಗದಲ್ಲಿ ಎಲ್ಲಿಯೇ ಅರಣ್ಯ ಅಪರಾಧ ನಡೆದರೂ ಅಧಿಕಾರಿ-ಸಿಬ್ಬಂದಿಗೆ ಸುರೇಶ ಸಿದ್ದಿ ಮೇಲೆ ಮೊದಲ ಕಣ್ಣು. ಹೀಗಾಗಿಯೇ ಅವರು ಯಾರೊಂದಿಗೂ ಹೆಚ್ಚಿಗೆ ಮಾತನಾಡುವುದಿಲ್ಲ. ಯಾರೊಂದಿಗೂ ಬೆರೆಯುವುದಿಲ್ಲ!
ಸುರೇಶ ಸಿದ್ದಿ ಅವರಿಗೆ ಯಕ್ಷಗಾನ ಎಂದರೆ ಅಚ್ಚುಮೆಚ್ಚು. ಯಕ್ಷವೇಷ ಧರಿಸಿ ಫೋಟೋ ತೆಗೆಸಿಕೊಳ್ಳಬೇಕು ಎಂಬುದು ಅವರ ಜೀವನದ ದೊಡ್ಡ ಆಸೆ. ಚಂದವಾಗಿ ಭಾಗವತಿಕೆಯನ್ನು ಸಹ ಅವರು ಮಾಡುತ್ತಾರೆ. ಬೇರವಯವರ ಕುಣಿತ-ಭಾಗವತಿಕೆ ನೋಡಿಯೇ ಅವರು ಹೆಜ್ಜೆ ಹಾಕುವುದು ಹಾಗೂ ಹಾಡುವುದನ್ನು ಕಲಿತಿದ್ದಾರೆ.
45 ವರ್ಷದ ಸುರೇಶ ಸಿದ್ದಿ ಏಕಾಂಗಿ. ಪುಟ್ಟ ಜೋಪಡಿಯಲ್ಲಿ ಒಬ್ಬರೇ ವಾಸಿಸುತ್ತಾರೆ. ಯಾರಾದರೂ ಕರೆದರೆ ಕೆಲಸಕ್ಕೆ ಹೋಗುತ್ತಾರೆ. ಕೆಲಸಕ್ಕೆ ಕರೆದವರು ಕಾಸು ಕೊಡುವುದು ಕಡಿಮೆ. ಹೊಟ್ಟೆಗೆ ಊಟ-ಒಂದು ಲೋಟ ಮಜ್ಜಿಗೆ ಕೊಟ್ಟು ಕಳುಹಿಸುವವರೇ ಅಧಿಕ. ಕೆಲಸ ಇಲ್ಲದ ದಿನಗಳಲ್ಲಿ ಕಾಡಿನ ಹಣ್ಣುಗಳನ್ನು ತಿಂದು ಕುಡಿದು ಬದುಕುತ್ತಾರೆ. `ನೆಲ್ಲಿಕಾಯಿ ತಿಂದು ನೀರು ಕುಡಿದರೆ ಎರಡು ದಿನವಾದರೂ ಹಸಿವಾಗುವುದಿಲ್ಲ’ ಎಂಬುದನ್ನು ಸುರೇಶ ಸಿದ್ದಿ ಕಂಡುಕೊoಡಿದ್ದಾರೆ. ನಾಯಿ ಏನಾದರೂ ಸಣ್ಣಪುಟ್ಟ ಶಿಕಾರಿ ಮಾಡಿದರೆ ಆ ದಿನ ಸುರೇಶ ಸಿದ್ದಿ ಪಾಲಿಗೆ ಹಬ್ಬ!
ಯಲ್ಲಮ್ಮ ದೇವಿ ಆರಾಧಕರಾದವ ಅವರು ಹರಕೆಗಾಗಿ ಕೂದಲು ಬಿಟ್ಟಿದ್ದರು. ಆ ಕೂದಲಿಗೆ ಇದೀಗ ಮಾಂಸ ಬೆಳೆದಿದ್ದು, ಕತ್ತರಿಸಲು ಅಸಾಧ್ಯ. ಅವರ ವೇಷ-ಜಡೆ ನೋಡಿ ಹತ್ತಿರ ಬಂದು ಮಾತನಾಡಿಸುವವರು ವಿರಳ. `ತಾನು ಮದುವೆ ಆದರೂ ಹೆಂಡತಿಯನ್ನು ಬೇರೆಯವರು ಅಪಹರಿಸುತ್ತಾರೆ’ ಎಂಬುದು ಅವರ ದೂರು. ಕೆಳಾಸೆಗೆ ಭೇಟಿ ನೀಡುವ ಕೆಲ ಪ್ರವಾಸಿಗರು ಸುರೇಶ ಸಿದ್ದಿ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರವರು ನೀಡಿದ ಕಾಸನ್ನು ಸುರೇಶ ಸಿದ್ದಿ ದೇವರ ಪಟದ ಮುಂದಿಡುತ್ತಾರೆ. ದೇವರ ಮುಂದಿದ್ದ ಕಾಸು ಕಳ್ಳರ ಪಾಲಾಗುವುದೇ ಹೆಚ್ಚು!
ಸುರೇಶ ಸಿದ್ದಿ ಅವರ ಬಳಿ ಮೊಬೈಲ್ ಇಲ್ಲ. ವನ ಚೇತನ ತಂಡದವರು ಅವರಿಗೆ ಸೈಕಲ್ ಕೊಡಿಸಿದ್ದಾರೆ. ಮೊದಲು ನಡೆದು ಹೋಗುತ್ತಿದ್ದ ಅವರು ಇದೀಗ ಸೈಕಲ್ ಸವಾರಿ ಮಾಡುತ್ತಾರೆ. ಪೇಟೆಗೆ ಹೋದಾಗ ಸಹ ಮೂಲೆಯಲ್ಲಿ ಕುಳಿತು ಎಲ್ಲರೂ ಹೋದ ಮೇಲೆ ಅಗತ್ಯ ವಸ್ತು ಪಡೆಯುತ್ತಾರೆ. ಹಲವರು ಅವರನ್ನು `ಮಾನಸಿಕ’ ಎನ್ನುತ್ತಾರೆ. ಇನ್ನೂ ಕೆಲವರು `ಮುಗ್ದ’ ಎನ್ನುತ್ತಾರೆ. `ಆತ ಕಳ್ಳ’ ಎನ್ನುವವರೂ ಇದ್ದಾರೆ. ಆದರೆ, ಜನರ ಈ ಯಾವ ಮಾತುಗಳಿಗೆ ಸುರೇಶ ಸಿದ್ದಿ ಎಂದಿಗೂ ತಲೆ ಕೆಡಿಸಿಕೊಂಡಿಲ್ಲ!