ಅಂಕೋಲಾ: ಶಿರೂರು ಗುಡ್ಡ ಕುಸಿತದ ನಂತರ ಗಂಗಾವಳಿ ನದಿಯಲ್ಲಿ ಸಿಕ್ಕ ಮೂಳೆಯ ಡಿಎನ್ಎ ವರದಿ ಸೋಮವಾರ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದೆ. ನದಿಯಲ್ಲಿ ಸಿಕ್ಕ ಮೂಳೆ ಮನುಷ್ಯನದು ಎಂದು ಖಚಿತವಾಗಿದೆ. ಜೊತೆಗೆ ಅದು ಪುರುಷನ ಮೂಳೆ ಎಂದು ಗೊತ್ತಾಗಿದೆ. ಆದರೆ, ಸಾವನಪ್ಪಿದ ಪುರುಷ ಯಾರು? ಎಂದು ವರದಿ ಹೇಳಿಲ್ಲ!
ಶಿರೂರು ಗುಡ್ಡ ಕುಸಿತದಿಂದ ಸಾವನಪ್ಪಿದವರ ದೇಹದ ಎಲ್ಲಾ ಭಾಗಗಳು ಸಿಕ್ಕಿಲ್ಲ. ಮೊದಲು ಶವ ಪತ್ತೆಯಾದ ತಮಿಳುನಾಡಿನ ಗ್ಯಾಸ್ ಟ್ಯಾಂಕರ್ ಚಾಲಕ ಚೆನ್ನವಣ್ಣನ ಅವರ ಕಾಲುಗಳು ಮಾತ್ರ ಸಿಕ್ಕಿದ್ದವು. ಚೆನ್ನವಣ್ಣನ ಕಾಲುಗಳು ಬೆಳಂಬಾರದ ಬಳಿ ಪತ್ತೆಯಾಗಿದ್ದು, ಈ ಮೂಳೆ ಅವರದ್ದಾಗಿರುವ ಸಾಧ್ಯತೆ ಕಡಿಮೆ.
ಇನ್ನೂ ಕೇರಳದ ಅರ್ಜುನನ ಶವ ಆತನಿದ್ದ ಲಾರಿಯೊಳಗೆ ಸಿಕ್ಕಿದ್ದು, ಈ ಮೂಳೆ ಬೇರೆ ಪ್ರದೇಶದಲ್ಲಿ ಸಿಕ್ಕಿದ್ದಾಗಿದೆ. ಹೀಗಾಗಿ ಈ ಮೂಳೆ ಸಹ ಅರ್ಜುನದ್ದಾಗಿರಲು ಸಾಧ್ಯವಿಲ್ಲ ಎಂದು ಅಂದಾಜಿಸಲಾಗಿದೆ. ಹೀಗಾಗಿ ಈವರೆಗೂ ಯಾವುದೇ ಗಂಗಾವಳಿಯ ಲೋಕೇಶ ನಾಯ್ಕ ಹಾಗೂ ಜಗನ್ನಾಥ ನಾಯ್ಕ ಅವರಲ್ಲಿ ಒಬ್ಬರ ಮೂಳೆ ಇದಾಗಿರಬಹುದು ಎಂಬ ಶಂಕೆಯಿದೆ.
ಕಾರ್ಯಾಚರಣೆ ವೇಳೆ ಸಿಕ್ಕ ಮೂಳೆಗೆ ಅತಿಯಾದ ಕೆಮಿಕಲ್ ಮಿಶ್ರಣ ನಡೆದ ಕಾರಣ ಡಿಎನ್ಎ ವರದಿ ಸಾಧ್ಯವಾಗಿಲ್ಲ. ವೈದ್ಯಕೀಯ ಸಿಬ್ಬಂದಿ ಎಡವಟ್ಟಿನಿಂದ ಹೆಚ್ಚಿನ ಕೆಮಿಕಲ್ ಮಿಶ್ರಣ ನಡೆದಿತ್ತು. ಪ್ರಸ್ತುತ ಮೂಳೆಯ ವೈದ್ಯಕೀಯ ವರದಿ ಬಂದಿದ್ದರೂ ಅದರಲ್ಲಿ ಮೂಳೆ ಯಾರದ್ದು? ಎಂಬ ಬಗ್ಗೆ ಖಚಿತವಿಲ್ಲ.