`ಕರಾವಳಿಯ ಏಕೈಕ ಸರಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಾದ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೇವೆ ಸಿಗುವಂತೆ ಮಾಡಬೇಕು’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ. ಈ ಕುರಿತು ಅವರು ಶುಕ್ರವಾರ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಅವರಿಗೂ ಮನವಿ ಸಲ್ಲಿಸಿ, ಚರ್ಚಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ಗುಡ್ಡಗಾಡು, ಅರಣ್ಯ ಪ್ರದೇಶ ಮತ್ತು ಕರಾವಳಿ ಸಮುದ್ರ ತೀರ ಹೊಂದಿದೆ. ಗೋವಾ ರಾಜ್ಯದ ಗಡಿ ಪ್ರದೇಶದಲ್ಲಿದೆ. ಇಲ್ಲಿನ ಶೇ 80ರಷ್ಟು ಅರಣ್ಯ ಭೂಮಿಯಿದ್ದು, ವಿವಿಧ ಯೋಜನೆಗಳಿಗಾಗಿ ಜನ ಸ್ವಂತ ಭೂಮಿ ಕಳೆದುಕೊಂಡಿದ್ದಾರೆ. ಸೀಬರ್ಡ ನೌಕಾನೆಲೆ, ಜಲ ವಿದ್ಯುತ್ ಯೋಜನೆ, ಕೈಗಾ ಅಣು ಘಟಕ ಸೇರಿ ಹಲವು ಯೋಜನೆಗಳಿವೆ. ವಿಮಾನ ನಿಲ್ದಾಣ, ಸಾಗರಮಾಲಾ, ಬಂದರು ನಿರ್ಮಾಣ ಸೇರಿ ಅನೇಕ ಯೋಜನೆಗಳು ಆರಂಭದ ಹಂತದಲ್ಲಿದೆ. ಆದರೆ, ವೈದ್ಯಕೀಯ ಸೌಲತ್ತು ವಿಷಯದಲ್ಲಿ ಜಿಲ್ಲೆ ತೀರಾ ಹಿಂದುಳಿದಿದೆ’ ಎಂದು ಮಾಧವ ನಾಯಕ ವಿವರಿಸಿದರು.
`ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಕೇಂದ್ರ ಪ್ರಾರಂಭವಾಗಿ ದಶಕ ಕಳೆದರೂ ಪೂರ್ಣ ಪ್ರಮಾಣದ ವೈದ್ಯರನ್ನು ಪೂರೈಸಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಈ ಹಿಂದಿನ ಸರಕಾರದ ವೈದ್ಯಕೀಯ ಸಚಿವರಿಗೆ ಸಹ ಈ ಬಗ್ಗೆ ಮನವರಿಕೆ ಮಾಡಲಾಗಿದ್ದು, ಆ ವೇಳೆ ನೀಡಿದ ಭರವಸೆಯೂ ಈಡೇರಿಲ್ಲ. ಈವರೆಗೂ ತಜ್ಞ ವೈದ್ಯರ ನೇಮಕ ಆಗದಿರುವುದನ್ನು ಗಮನಿಸಿ ಕೂಡಲೇ ಕ್ರಮ ಜರುಗಿಸಬೇಕು’ ಎಂದು ಸೆಂಟ್ ಮಿಲಾಗ್ರಿಸ್’ನ ಮ್ಯಾನೆಜಿಂಗ್ ಡೈರೆಕ್ಟರ್ ಜಾರ್ಜ ಫರ್ನಾಂಡಿಸ್ ಒತ್ತಾಯಿಸಿದರು.
`ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಸಜ್ಜಿತ ಆಸ್ಪತ್ರೆ ಬೇಕು ಎಂಬ ಪ್ರತಿಭಟನೆ ನಡೆಯುತ್ತಿದೆ. ಆದರೆ, ಸುಸಜ್ಜಿತ ಕಟ್ಟಡ ನಿರ್ಮಾಣ ಆದ ಮಾತ್ರಕ್ಕೆ ಸುಸಜ್ಜಿತ ಆಸ್ಪತ್ರೆ ಸಾಧ್ಯವಿಲ್ಲ. ಸುಸಜ್ಜಿತ ಆಸ್ಪತ್ರೆಗೆ ತಜ್ಞ ವೈದ್ಯರು ಅಗತ್ಯ. ಹೀಗಾಗಿ ಕಾರವಾರ ಮೆಡಿಕಲ್ ಕಾಲೇಜನ್ನು ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿಸುವ ಬಗ್ಗೆ ಚಿಂತಿಸಬೇಕು’ ಎಂದು ಮಾಧವ ನಾಯಕ ಮನವರಿಕೆ ಮಾಡಿದರು.

`ಆಸ್ಪತ್ರೆಗೆ ಅಗತ್ಯವಿರುವ ಹೃದಯರೋಗ ತಜ್ಞರು, ನರರೋಗ ತಜ್ಞರು, ಮೂತ್ರಕೋಶ ತಜ್ಞರನ್ನು ಕೂಡಲೇ ನೇಮಿಸಬೇಕು. ಅಗತ್ಯ ಯಂತ್ರೋಪಕರಣಗಳನ್ನು ಪೂರೈಸಬೇಕು. ಜಿಲ್ಲೆಯಲ್ಲಿ ಏಕೈಕ ಯುರೋಲೊಜಿಸ್ಟ್ ಇದ್ದು, ಅವರು ಶಿರಸಿಯಲ್ಲಿದ್ದಾರೆ. ಕಾರವಾರಕ್ಕೂ ಒಬ್ಬರು ಯುರೋಲೊಜಿಸ್ಟ್’ರನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು. ಇದರೊಂದಿಗೆ ರೇಡಿಯೋಲೊಜಿಸ್ಟ್, ಅನ್ಕೊಲೊಜಿಸ್ಟ್, ಕ್ಷ-ಕಿರಣ ತಂತ್ರಜ್ಞರ ಅಗತ್ಯವಿದೆ. ಡಿ ದರ್ಜೆ ಸಿಬ್ಬಂದಿ ಕೊರತೆಯೂ ಇದ್ದು, ಅದನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು. `ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಶುಶ್ರುಕಿಯರಿಗೆ ಕೇವಲ 10 ಸಾವಿರ ರೂ ವೇತನ ಸಿಗುತ್ತಿದೆ. ನೂರಾರು ಸಿಬ್ಬಂದಿ ಇಲ್ಲಿ ದುಡಿಯುತ್ತಿದ್ದು, ಅವರಿಗೆ ಯಾವುದೇ ಭದ್ರತೆ ಇಲ್ಲ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವವರನ್ನು ವಿಶ್ವಾಸಕ್ಕೆ ಪಡೆದು ಸೇವೆಯನ್ನು ಖಾಯಂ ಮಾಡಬೇಕು’ ಎಂದು ಮನವಿ ಮಾಡಿದರು.
`ಅಗತ್ಯ ಆಂಬುಲೆನ್ಸ್ ಒದಗಿಸಬೇಕು. ಸಿಟಿ ಸ್ಕಾನ್ ಅವಧಿಯಲ್ಲಿನ ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು. ಪಕ್ಕದ ಜಿಲ್ಲೆಯ ಮಾದರಿಯಲ್ಲಿ ಇಲ್ಲಿಯೂ ಉಚಿತವಾಗಿ ಎಂ ಆರ್ ಐ ಸ್ಕಾನಿಂಗ್ ಸಿಗಬೇಕು. ಹೆದ್ದಾರಿಗೆ ಹೊಂದಿಕೊ0ಡು ಟ್ರಾಮಾ ಸೆಂಟರ್ ಸ್ಥಾಪಿಸಬೇಕು’ ಎಂಬ ಬೇಡಿಕೆಗಳನ್ನು ಮುಂದಿಟ್ಟರು. ಈ ಎಲ್ಲಾ ಬೇಡಿಕೆಗಳ ಪಟ್ಟಿ ಆಲಿಸಿದ ಸಚಿವರು ಅದನ್ನು ಈಡೇರಿಸುವ ಭರವಸೆ ನೀಡಿದರು. `ಈ ಭರವಸೆ ಬರೀ ಭರವಸೆ ಆಗದಿರಲಿ’ ಎಂದು ಜನಶಕ್ತಿ ವೇದಿಕೆಯ ಪದಾಧಿಕಾರಿಗಳಾದ ನಿತ್ಯಾನಂದ ನಾಯ್ಕ, ನಾಗೇಂದ್ರ ನಾಯ್ಕ ಅಂಕೋಲಾ, ಪ್ರದೀಪ ಗೌಡ ಬಿಣಗಾ ಮತ್ತೊಮ್ಮೆ ಮನವಿ ಮಾಡಿದರು.