ಹೊನ್ನಾವರ ಆದಿತ್ಯ ನಾಯ್ಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನಸ್ಸಿಗೆ ಬೇಸರವಾಗಿರುವುದರಿಂದ ಅವರು ಕ್ರಿಮಿನಾಶಕ ಸೇವಿಸಿರುವ ಬಗ್ಗೆ ಹೇಳಿಕೆ ನೀಡಿದ್ದು, ಯಾವ ಕಾರಣಕ್ಕೆ ಬೇಸರವಾಯಿತು? ಎಂದು ಯಾರಿಗೂ ತಿಳಿಸಿಲ್ಲ.
ಹೊನ್ನಾವರದ ಖಾರ್ವಾದ ನಾಥಗೇರಿಯಲ್ಲಿ ಆದಿತ್ಯ ನಾಯ್ಕ (34) ವಾಸವಾಗಿದ್ದರು. ಬಾಡದ ರೆಸಾರ್ಟಿನಲ್ಲಿ ಅವರು ಕೆಲಸ ಮಾಡಿಕೊಂಡಿದ್ದರು. ಏಪ್ರಿಲ್ 1ರ ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ್ದರು. ಮನೆ ಮೇಲಿನ ಅಟ್ಟದಲ್ಲಿ ಆದಿತ್ಯ ನಾಯ್ಕ ನಿದ್ರಿಸುತ್ತಿದ್ದರು.
ಮರುದಿನ ನಸುಕಿನ 4 ಗಂಟೆ ವೇಳೆಗೆ ಆದಿತ್ಯ ನಾಯ್ಕ ಕ್ರಿಮಿನಾಶಕ ಸೇವಿಸಿದ್ದರು. ಗಿಡಗಳಿಗೆ ಹೊಡೆಯುವುದಕ್ಕಾಗಿ ತಂದಿರಿಸಿದ್ದ ಕ್ರಿಮಿನಾಶಕ ಆದಿತ್ಯ ಅವರನ್ನು ಅಸ್ವಸ್ಥರನ್ನಾಗಿಸಿತು. ಆದಿತ್ಯ ನಾಯ್ಕ ಅಸ್ವಸ್ಥರಾಗಿರುವುದನ್ನು ನೋಡಿದ ಅವರ ತಂದೆ ತಿಮ್ಮಪ್ಪ ನಾಯ್ಕ `ಏನಾಯಿತು?’ ಎಂದು ಪ್ರಶ್ನಿಸಿದರು.
ಆಗ, `ಮನಸ್ಸಿಗೆ ಬೇಸರವಾಗಿ ಕ್ರಿಮಿನಾಶಕ ಸೇವಿಸಿದೆ’ ಎಂದು ಆದಿತ್ಯ ನಾಯ್ಕ ಉತ್ತರಿಸಿದರು. ಇದರಿಂದ ಕಂಗಾಲಾದ ತಿಮ್ಮಪ್ಪ ನಾಯ್ಕ ಅವರು ತಮ್ಮ ಇನ್ನೊಬ್ಬ ಪುತ್ರ ಅಜಯ ನಾಯ್ಕ ಹಾಗೂ ಪತ್ನಿ ಸುಶೀಲ ನಾಯ್ಕ ಜೊತೆ ಸೇರಿ ಆದಿತ್ಯ ನಾಯ್ಕರನ್ನು ಆಸ್ಪತ್ರೆಗೆ ದಾಖಲಿಸಿದರು. ಹೊನ್ನಾವರದ ಸೆಂಟ್ ಇಗ್ನೇಶಿಯನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು.
ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆದಿತ್ಯ ನಾಯ್ಕರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಏಪ್ರಿಲ್ 5ರಂದು ಅವರು ಸಾವನಪ್ಪಿದರು.
ಹಳ್ಳಕ್ಕೆ ಬಿದ್ದ ಬೈಕು: ಯುವತಿ ಸಾವು!
ಮುಂಡಗೋಡದ ಮೈನಳ್ಳಿ ಬಳಿಯಿರುವ ಹಳ್ಳದಲ್ಲಿ ಬೈಕ್ ಬಿದ್ದ ಪರಿಣಾಮ ಯುವತಿಯೊಬ್ಬರು ಸಾವನಪ್ಪಿದ್ದಾರೆ.
ಕಾರವಾರದ ಹಬ್ಬುವಾಡದಲ್ಲಿ ಪೆಂಟಿoಗ್ ಕೆಲಸ ಮಾಡುತ್ತಿದ್ದ ರಫೀಕ್ ಶೇಖ್ ಅವರು ಮುಂಡಗೋಡಿನ ಗುಂಜಾವತಿಯ ಲತಿಪಾ ನವಾಜ್ ಖಾನ್ (31) ಅವರ ಜೊತೆ ಬೈಕಿನಲ್ಲಿ ತೆರಳುತ್ತಿದ್ದರು. ಏಪ್ರಿಲ್ 5ರಂದು ಮುಂಡಗೋಡಿನ ಮೈನಳ್ಳಿ ಗ್ರಾಮದಲ್ಲಿ ಕುದುರೆನಾಳ ಹಳ್ಳದ ತಿರುವಿನಲ್ಲಿ ಬೈಕು ಅಪಘಾತವಾಯಿತು.
ಆ ಬೈಕು ಅಲ್ಲಿದ್ದ ಕುದುರೆನಾಳ ಹಳ್ಳದಲ್ಲಿ ಬಿದ್ದ ಪರಿಣಾಮ ಹಿಂದೆ ಕೂತಿದ್ದ ಗುಂಜಾವತಿಯ ಲತಿಪಾ ನವಾಜ್ ಖಾನ್ ಅವರಿಗೆ ಪೆಟ್ಟಾಯಿತು. ಗಂಭೀರ ಗಾಯಗೊಂಡ ಅವರು ಅಲ್ಲಿಯೇ ಸಾವನಪ್ಪಿದರು. ರಫೀಕ್ ಶೇಖ್ ಅವರ ಮುಖ, ಕಾಲುಗಳಿಗೆ ಸಹ ಗಂಭೀರ ಪ್ರಮಾಣದಲ್ಲಿ ಗಾಯಗಳಾಗಿವೆ.
ಕಳ್ಳರ ಕೈ ಚಳಕ: ಪ್ರವಾಸಕ್ಕೆ ಬಂದವರಿಗೆ ಪ್ರಯಾಸ
ಕುಮಟಾದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಆರ್ ರಜನೀಶ ಅವರಿಗೆ 90 ಸಾವಿರ ರೂ ನಷ್ಟವಾಗಿದೆ. ಅವರು ವಾಸವಾಗಿದ್ದ ಕೋಣೆಗೆ ನುಗ್ಗಿದ ಕಳ್ಳನೊಬ್ಬ ವಿವಿಧ ವಸ್ತುಗಳನ್ನು ಕದ್ದು ಪರಾರಿಯಾದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಎಂ ಎಲ್ ಮೋಟಾರ್ಸಿನಲ್ಲಿ ಸಹಾಯಕ ವ್ಯವಸ್ಥಾಪಕರಾಗಿರುವ ಆರ್ ರಜನೀಶ ಅವರು ಏಪ್ರಿಲ್ 4ರಂದು ಗೋಕರ್ಣಕ್ಕೆ ಬಂದಿದ್ದರು. ಇಲ್ಲಿನ ಸೀ ಶೋರ್ ಕಫೆಯಲ್ಲಿ ಅವರು ರೂಂ ಪಡೆದಿದ್ದರು. ಅವರು ಹೊರಗಡೆ ಹೋದಾಗ ಅಪರಿಚಿತರೊಬ್ಬರು ಆಗಮಿಸಿ ರೂಮಿನಲ್ಲಿದ್ದ ವಸ್ತುಗಳನ್ನು ದೋಚಿದ್ದಾರೆ.
ಸೀ ಶೋ ರೂಮಿನಲ್ಲಿ ಕೆಲಸ ಮಾಡುವ ಮನೋಜ ಹಾಗೂ ಪ್ರಮೋದ ಅವರು ಆರ್ ರಜನೀಶ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದರು. `ನಿಮ್ಮ ರೂಮಿಗೆ ಯಾರೋ ಬಂದು ಹೋದ ಹಾಗಾಯಿತು. ನಿಮ್ಮ ವಸ್ತುಗಳು ಸರಿಯಾಗಿದೆಯಾ? ನೋಡಿಕೊಳ್ಳಿ’ ಎಂದು ಸಲಹೆ ನೀಡಿದರು. ಅದಾದ ನಂತರ ಆರ್ ರಜನೀಶ ಅವರು ತಮ್ಮ ಬ್ಯಾಗಿನ ಪರಿಶೀಲನೆ ಮಾಡಿದ್ದು, ಆಗ ಹಣ ಸೇರಿ ವಿವಿಧ ವಸ್ತು ಕಾಣೆಯಾಗಿರುವುದು ಗಮನಕ್ಕೆ ಬಂದಿತು.
10 ಸಾವಿರ ರೂ ಹಣ, ಕಿವಿಯೋಲೆ, ವಾಚ್, ಮೊಬೈಲ್, ಕನ್ನಡಕ ಸೇರಿ 90 ಸಾವಿರ ರೂ ಮೌಲ್ಯದ ಸಾಮಗ್ರಿ ಕಳ್ಳತನವಾದ ಬಗ್ಗೆ ಆರ್ ರಜನೀಶ ಅವರು ಪೊಲೀಸ್ ದೂರು ನೀಡಿದ್ದಾರೆ.
ಖಾಸಗಿ ಶಾಲೆ: ದುಬಾರಿ ಶುಲ್ಕದ ಮೇಲೆ ಕಳ್ಳರ ಕಣ್ಣು!
ಭಟ್ಕಳದ ನೌನಿಹಾಲ್ ಸೆಂಟ್ರಲ್ ಸ್ಕೂಲ್’ನಲ್ಲಿ ಕಳ್ಳತನ ನಡೆದಿದೆ. ಮಕ್ಕಳ ಅಡ್ಮೀಶನ್ ಹಣವನ್ನು ಕಳ್ಳರು ದೋಚಿದ್ದಾರೆ.
ಭಟ್ಕಳದ ಕಿದ್ವಾಯಿ ರಸ್ತೆಯಲ್ಲಿ ನೌನಿಹಾಲ್ ಸೆಂಟ್ರಲ್ ಸ್ಕೂಲ್ ನಡೆಯುತ್ತಿದೆ. ಅಲ್ಲಿ ಏಪ್ರಿಲ್ 3ರ ಸಂಜೆ 6 ಗಂಟೆ ನಂತರ ಈ ಕಳ್ಳತನ ನಡೆದಿದೆ. ಏಪ್ರಿಲ್ 5ರಂದು ಶಾಲೆಯ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಶಾಲೆಗೆ ನುಗ್ಗಿದ ಕಳ್ಳರು ಮೊದಲು ಕಚೇರಿಯ ಬಾಗಿಲು ಒಡೆದಿದ್ದಾರೆ. ಅದಾದ ನಂತರ ಟೆಬಲ್ ಡ್ರಾವರಿನಲ್ಲಿದ್ದ ಹಣವನ್ನು ಎಗರಿಸಿದ್ದಾರೆ. ಒಟ್ಟು 2.26 ಲಕ್ಷ ರೂ ಹಣ ನಾಪತ್ತೆಯಾಗಿದೆ. `ಮಕ್ಕಳು ಅಡ್ಮಿಶನ್ ಮಾಡಿಸಿದ ಹಣ ಇದಾಗಿದ್ದು, ಅದನ್ನು ಹುಡುಕಿಕೊಡಿ’ ಎಂದು ನೌನಿಹಾಲ್ ಸೆಂಟ್ರಲ್ ಸ್ಕೂಲಿನ ಪೈನಾನ್ಸಿಯಲ್ ಸೆಕ್ರೆಟರಿ ಮಹಮದ್ ಕೋಲಾ ಪೊಲೀಸರಲ್ಲಿ ಅಳಲು ತೋಡಿಕೊಂಡಿದ್ದಾರೆ.