ಭಟ್ಕಳ: ವಕ್ಟ್ ಆಸ್ತಿ ವಿಷಯವಾಗಿ ಭಟ್ಕಳದಲ್ಲಿ ಹಿಂದು ಮುಸ್ಲಿಂ ನಡುವೆ ವಾಕ್ಸಮರ ನಡೆದಿದ್ದು, ಇದೀಗ ಅದು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಎಸ್ಡಿಪಿಐ ಬ್ಯಾನರ್ ಅಡಿ ಪ್ರತಿಭಟನೆ ನಡೆಸಿದ ಮುಸ್ಲಿಂ ಸಮುದಾಯದವರ ಹೆಸರು ಉಲ್ಲೇಖಿಸಿದ ಬಿಜೆಪಿಗರು ಪ್ರಜೋದನಾಕಾರಿ ಭಾಷಣ ಮಾಡಿದವರ ಮೇಲೆ ಕ್ರಮ ಜರುಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಈ ಬೆನ್ನಲ್ಲೆ ಬಿಜೆಪಿ ಮುಖಂಡ ಕೃಷ್ಣ ನಾಯ್ಕ ವಿರುದ್ಧ ದ್ವೇಷ ಭಾಷಣ ಮಾಡಿದ ಕಾರಣ ಕ್ರಮ ಜರುಗಿಸುವಂತೆ ದೂರು ದಾಖಲಿಸಿದೆ.
ಪ್ರಚೋದನಾಕಾರಿ ಘೋಷಣೆ ಮತ್ತು ಭಾಷಣದ ಮೂಲಕ ಸಮಾಜದಲ್ಲಿ ಅಶಾಂತಿ ಹರಡಿಸುವವರ ವಿರುದ್ಧ ಮೊದಲು ಭಟ್ಕಳ ಬಿಜೆಪಿ ಪೊಲೀಸ್ ನಿರೀಕ್ಷಕರಿಗೆ ಮನವಿ ಸಲ್ಲಿಸಿತು. `ಕೆಲವು ವ್ಯಕ್ತಿಗಳು ಎಸ್.ಡಿ.ಪಿ.ಐ. ಸಂಘಟನೆಯ ಹೆಸರಿನಲ್ಲಿ ನ 6ರಂದು ಭಟ್ಕಳದ ತಾಲೂಕು ಪಂಚಾಯತ ಎದುರು ಪ್ರತಿಭಟಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಸಂಘ ಪರಿವಾರ, ವೀರ ಸಾವರ್ಕರ ಹಾಗೂ ಇತರ ದೇಶಭಕ್ತ ಸಂಘಟನೆ ಮತ್ತು ವ್ಯಕ್ತಿಗಳನ್ನು ನಿಂದಿಸಲಾಗಿದೆ. ಜೊತೆಗೆ ಪ್ರಚೋದನಾಕಾರಿ ಕೋಮು ದ್ವೇಷ ಹರಡಿಸುವ ರೀತಿಯಲ್ಲಿ ಭಾಷಣ ಮಾಡಿದ್ದಾರೆ’ ಎಂದು ಬಿಜೆಪಿ ಪೊಲೀಸರಿಗೆ ನೀಡಿದ ಪತ್ರದಲ್ಲಿ ಉಲ್ಲೇಖಿಸಿದೆ.
`ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲವು ವ್ಯಕ್ತಿಗಳು ಈ ಹಿಂದೆ ಪಿ.ಎಫ್.ಐ. ಸಂಘಟನೆಯಲ್ಲಿಯೂ ಸಕ್ರಿಯರಾಗಿದ್ದ ಶಂಕೆಯಿದೆ. ತೌಫಿಕ್ ಬ್ಯಾರಿ ಮತ್ತು ವಾಸಿಂ ಮಣಿಗಾರ ಜೊತೆ 50 ಜನರು ಪ್ರತಿಭಟನೆಯಲ್ಲಿ ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದಾರೆ’ ಎಂದ ಬಿಜೆಪಿ ಮುಖಂಡರು ಮನವಿ ಜೊತೆ ವಿಡಿಯೋ ಸಿಡಿ ನೀಡಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ಮುಸ್ಲಿಂ ವಿರುದ್ಧ ಭಾಷಣ: ಬಿಜೆಪಿ ಮುಖಂಡನ ವಿರುದ್ಧ ಪೊಲೀಸ್ ದೂರು!
ಶುಕ್ರವಾರ ರಾತ್ರಿ ಪೊಲೀಸ್ ಠಾಣೆಗೆ ಹಾಜರಾಗಿದ್ದ ನವಾಯಿತ್ ಕಾಲೋನಿಯ ಮೊಹಿದ್ನಿನ್ ರುಕ್ನುದ್ಧೀನ್ ಅಲಿ ಸಾಹೇಬ್ ಬಿಜೆಪಿ ಮುಖಂಡ ಕೃಷ್ಣ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನವೆಂಬರ್ 4ರಂದು ಭಟ್ಕಳ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬಿಜೆಪಿಗರು ಪ್ರತಿಭಟಿಸಿದಾಗ ಗೋವಿಂದ ನಾಯ್ಕ ಹಿಂಸೆಗೆ ಪ್ರಚೋದನೆ ನೀಡಿ ಭಾಷಣ ಮಾಡಿದ್ದಾರೆ ಎಂಬುದು ಅವರ ದೂರು.
`ಮುಸಲ್ಮಾನರು ಇಲ್ಲಿ ಬಾಡಿಗೆದಾರರು. ವಕ್ಟ್ ಆಸ್ತಿ ಅವರಿಗೆ ಸೇರಿದಲ್ಲ. ಹಿಂದುಗಳಿಗೆ ಹಿಂದುಸ್ತಾನ. ಮುಸಲ್ಮಾನರಿಗೆ ಪಾಕಿಸ್ತಾನ ಎಂದು ಗೋವಿಂದ ನಾಯ್ಕ ಭಾಷಣ ಮಾಡಿದ್ದಾರೆ’ ಎಂದು ಅವರು ದೂರಿನಲ್ಲಿ ವಿವರಿಸಿದ್ದಾರೆ. `ಮುಸಲ್ಮಾನರಿಗೆ ಆಸ್ತಿ ಬೇಕು ಎಂದಾದರೆ ಅವರು ಪಾಕಿಸ್ತಾನಕ್ಕೆ ಹೋಗಿ ಕೇಳಬೇಕು. 1947ರಲ್ಲಿಯೇ ಅವರ ಆಸ್ತಿ ಪಾಲು ಮಾಡಿ ಕೊಡಲಾಗಿದೆ. ನಮ್ಮ ಆಸ್ತಿ ಕೇಳಿದರೆ ನಿಮ್ಮನ್ನು ಪಾಕಿಸ್ತಾನಕ್ಕೆ ಓಡಿಸುತ್ತೇವೆ ಎಂದು ಗೋವಿಂದ ನಾಯ್ಕ ಭಾಷಣ ಮಾಡಿದ್ದಾರೆ’ ಎಂದು ಮೊಹಿದ್ನಿನ್ ರುಕ್ನುದ್ಧೀನ್ ಅಲಿ ಸಾಹೇಬ್ ದೂರಿನಲ್ಲಿ ವಿವರಿಸಿದ್ದಾರೆ.
ಮುಸಲ್ಮಾನರ ಹಿಂಸೆಗೆ ಪ್ರಚೋಧನೆ ನೀಡಿ ಅವರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಬಗ್ಗೆ ಅವರು ಗೋವಿಂದ ನಾಯ್ಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.