ಕುಮಟಾ: 78 ವರ್ಷದ ಬಲಿಯಮ್ಮ ಮುಕ್ರಿ ಅವರ ಮನೆಗೆ ನುಗ್ಗಿದ ನಾಲ್ವರು ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ!
ಕಳೆದ ಮಳೆಗಾಲದಲ್ಲಿ ಕುಮಟಾ ಹೆಗಡೆ ಮಚ್ಚಗೋಣದ ಬಲಿಯಮ್ಮ ಮುಕ್ರಿ ಅವರ ಮನೆ ಕಪೌಂಡ್ ಬಿದ್ದು ಹೋಗಿತ್ತು. ಬಲಿಯಮ್ಮ ಅವರ ಮಗ ಜಟ್ಟಿ ಮುಕ್ರಿ ಅದನ್ನು ಸರಿಪಡಿಸುತ್ತಿದ್ದಾಗ ಮೈದುನನ ಕುಟುಂಬದವರು ತಕರಾರು ಮಾಡಿದ್ದರು. ಇದೇ ವಿಷಯವಾಗಿ ಜಟ್ಟಿ ಮುಕ್ರಿ ಹಾಗೂ ಅವರ ತಾಯಿಯ ಮೈದುನ ಮಾಸ್ತಿ ಮುಕ್ರಿ ನಡುವೆ ವೈಮನಸ್ಸು ಉಂಟಾಗಿತ್ತು.
ಜನವರಿ 4ರಂದು ಬಲಿಯಮ್ಮ ಮುಕ್ರಿ ಅವರು ಒಬ್ಬರೆ ಮನೆಯಲ್ಲಿದ್ದಾಗ ಮಾಸ್ತಿ ಮುಕ್ರಿ, ಆತನ ಪತ್ನಿ ಸೀತಾ ಮುಕ್ರಿ ಅಲ್ಲಿಗೆ ಬಂದರು. ಅವರ ಮಕ್ಕಳಾದ ಗಣಪತಿ ಮುಕ್ರಿ ಹಾಗೂ ಗೋವಿಂದ ಮುಕ್ರಿ ಸಹ ಜೊತೆಯಿದ್ದರು. ಈ ಎಲ್ಲರೂ ಸೇರಿ ಬಲಿಯಮ್ಮ ಮುಕ್ರಿ ಅವರ ಮೇಲೆ ಕಲ್ಲಿನ ದಾಳಿ ನಡೆಸಿದರು. ಅದಾದ ನಂತರ ಬಡಿಗೆಯಿಂದ ಬಡಿದರು.
`ಇನ್ನೊಮ್ಮೆ ಸಿಕ್ಕಿದಾಗ ನಿನ್ನ ಜೊತೆ ನಿನ್ನ ಮಗನನ್ನು ಕೊಲೆ ಮಾಡುವೆವು’ ಎಂದು ಬೆದರಿಸಿ ಅಲ್ಲಿಂದ ಹೋದರು. ಪೆಟ್ಟು ತಿಂದ ಬಲಿಯಮ್ಮ ಮುಕ್ರಿ ಈ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.