ಕಾರವಾರ: ಉತ್ತರ ಕನ್ನಡ ಮೂಲದ ಅಂತರರಾಷ್ಟ್ರೀಯ ಚೆಸ್ ಆಟಗಾರ ನಿತೀಶ್ ಬೇಳೂರಕರ್ ಊರಿಗೆ ಬಂದಿದ್ದು, ಜನಶಕ್ತಿ ವೇದಿಕೆಯವರು ಅವರನ್ನು ಬರಮಾಡಿಕೊಂಡು ಸನ್ಮಾನಿಸಿದರು.
ಕಾರವಾರದ ಕೋಡಿಭಾಗ ಮೂಲದವರಾದ ನಿತೀಶ್ ಬೇಳೂರಕರ್ ಟರ್ಕಿಯಲ್ಲಿ ನಡೆದ `ವರ್ಲ್ಡ್ ಸ್ಕೂಲ್ ಚೆಸ್’ನಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಇದರೊಂದಿಗೆ ಸ್ಕಾಟ್ಲ್ಯಾಂಡ್ ಹಾಗೂ ಸೌಥ್ ಆಫ್ರಿಕಾದಲ್ಲಿ ನಡೆದ ಕಾಮನ್ವೆಲ್ತ್ ಚೆಸ್ ಚಾಂಪಿಯನ್ ಶಿಪ್’ನಲ್ಲಿ ಸಹ ಅವರು ಸಿಲ್ವರ್ ಮೆಡಲ್ ಪಡೆದಿದ್ದಾರೆ.
ಬಾಲ್ಯದಿಂದಲೂ ಚೆಸ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ನಿತೀಶ್ ಅವರು ಈ ಆಟಕ್ಕಾಗಿ ಈವರೆಗೆ 50ಕ್ಕೂ ಅಧಿಕ ದೇಶ ಸುತ್ತಿದ್ದಾರೆ. ನಿತೀಶ್ ಬೇಳೂರಕರ್ ಎಂ.ಕಾo ಪದವೀಧರರಾಗಿದ್ದಾರೆ. ಪ್ರಸ್ತುತ ಅವರು ತಂದೆ ಸಂಜಯ್ ಹಾಗೂ ತಾಯಿ ಡಾ ರೂಪಾ ಅವರ ಜೊತೆ ಗೋವಾದ ಪಣಜಿಯಲ್ಲಿ ವಾಸವಾಗಿದ್ದಾರೆ. ನಿತೀಶ್ ಅವರ ಜೊತೆ ಅವರ ತಂದೆ-ತಾಯಿ ಸಹ ದೇಶ-ವಿದೇಶ ಸಂಚಾರ ನಡೆಸಿದ್ದಾರೆ.
ನಿತೀಶ್ ಬೇಳೂರಕರ್ ಅವರು ತಮ್ಮ ಊರಾದ ಕಾರವಾರಕ್ಕೆ ಬಂದ ವಿಷಯ ಅರಿತ ಜನಶಕ್ತಿ ವೇದಿಕೆಯವರು ಅವರನ್ನು ಭೇಟಿ ಮಾಡಿದರು. ವೇದಿಕೆ ಸದಸ್ಯರೆಲ್ಲರೂ ಸೇರಿ ಅವರನ್ನು ಗೌರವಿಸಿದರು. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ `ಉತ್ತಮ ಚೆಸ್ ಆಟಗಾರ ನಿತೀಶ್ ಬೇಳೂರಕರ್ ಅವರು ನಮ್ಮೂರಿನವರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆ’ ಎಂದರು.
ಜನಶಕ್ತಿ ವೇದಿಕೆ ಸದಸ್ಯರಾದ ರಾಮ ನಾಯ್ಕ, ಬಾಬು ಶೇಖ್, ರವಿ ರಾಥೋಡ್, ಮಂಜುನಾಥ ರಾಥೋಡ್, ಸೂರಜ್ ನಾಯ್ಕ, ಸ್ವಪ್ನಾ ಗುನಗಿ, ಅಲ್ತಾಫ್ ಶೇಖ್, ರಾಘು ನಾಯ್ಕ, ಯುವರಾಜ್ ಕೇಣಿ, ರಮೇಶ್ ಗುನಗಿ, ಸಂತೋಷ್ ಆಚಾರಿ ಇತರರಿದ್ದರು.