ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾದ ರೈತರ ಮಕ್ಕಳಿಗೆ ಸರ್ಕಾರ ತೋಟಗಾರಿಕಾ ತರಬೇತಿ ನಡೆಸಲು ನಿರ್ಧರಿಸಿದೆ. ಸಿದ್ದಾಪುರದ ಹೊಸೂರಿನಲ್ಲಿ ಈ ತರಬೇತಿ ನಡೆಯಲಿದೆ.
2025ರ ಮೇ 2ರಿಂದ ತರಬೇತಿ ಶುರುವಾಗಲಿದೆ. 2026ರ ಫೆ 28ರವರೆಗೂ ಕ್ಷೇತ್ರ ಅಧ್ಯಯನದ ಮೂಲಕ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಯ ತಂದೆ-ತಾಯಿ ಅಥವಾ ಪೋಷಕರು ಭೂಮಿ ಹೊಂದಿರುವುದು ಕಡ್ಡಾಯವಾಗಿದ್ದು, ಈ ಬಗ್ಗೆ ದೃಢೀಕರಣವನ್ನು ಒದಗಿಸಬೇಕು ಎಂಬ ನಿಯಮವಿದೆ. 18ರಿಂದ 30 ವರ್ಷದೊಳಗಿನವರಿಗೆ ಈ ತರಬೇತಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿ/ಪಂಗಡ, ಅಂಗವಿಕಲ ಹಾಗೂ ಮಾಜಿ ಸೈನಿಕರಿಗೆ ವಯಸ್ಸಿನಲ್ಲಿ ವಿನಾಯಿತಿ ಇದೆ.
ಪರಿಶಿಷ್ಟ ಜಾತಿ ಹಾಗೂ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳು 18ರಿಂದ 33 ವರ್ಷದೊಳಗಿರಬೇಕು. ಮಾಜಿ ಸೈನಿಕರು 33ರಿಂದ 65 ವರ್ಷದೊಳಗಿರಬೇಕು ಎಂದು ಸೂಚಿಸಲಾಗಿದೆ. ಏಪ್ರಿಲ್ 1ರ ಸಂಜೆ 5.30ರ ಒಳಗೆ ಆಸಕ್ತರು ಅರ್ಜಿ ಸಲ್ಲಿಸಲು ಅವಕಾಶವಿದೆ. ಶಿರಸಿಯ ಹಿರಿಯ ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಅರ್ಜಿ ನಮೂನೆಗಳು ಸಿಗುತ್ತವೆ. ಇಲಾಖೆ ವೆಬ್ ಸೈಟ್ https://horticulturedir.karnataka.gov.in/ ನಲ್ಲಿಯೂ ಮಾರ್ಚ 1ರಿಂದ ಮಾರ್ಚ 31ರವರೆಗೆ ಅರ್ಜಿ ನಮೂನೆ ಸಿಗಲಿದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಏಪ್ರಿಲ್ 8ರಂದು ಬೆಳಗ್ಗೆ 11 ಗಂಟೆಗೆ ಶಿರಸಿಯ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಸಲಾಗುತ್ತದೆ. ಏಪ್ರಿಲ್ 16ಕ್ಕೆ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.