ಶಾಲೆಯಲ್ಲಿ ಶಿಕ್ಷಕರ ಬದಲು ರೋಬೋಟ್ ಪಾಠ ಮಾಡಿದರೆ ಹೇಗಿರುತ್ತೆ? ಇಂಥಹದೊoದು ವಿಷಯದ ಬಗ್ಗೆ ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಮಕ್ಕಳು ಸುಧೀರ್ಘ ಚರ್ಚೆ ನಡೆಸಿದರು. ರೋಬೋಟ್ ಆಗಮನದಿಂದ ಶಿಕ್ಷಣ ವಲಯದಲ್ಲಿ ಕ್ರಾಂತಿ ಮೂಡಿಸುವ ಹಾಗೂ ಅದರ ಬಗ್ಗೆ ಕಾಳಜಿವಹಿಸಬೇಕಾದ ವಿಷಯಗಳ ಬಗ್ಗೆ ಅವರು ಮಾತನಾಡಿಕೊಂಡರು. ಇದಕ್ಕೆ ಅನುಗುಣವಾಗಿ 50ಕ್ಕೂ ಅಧಿಕ ಪ್ರಯೋಗದ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಮಾಹಿತಿ ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರದಲ್ಲಿ ಇದೀಗ ಎಐ ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ಹೋಲಿ ರೋಜರಿ ಪ್ರೌಢಶಾಲೆಯ ನಡೆದ ತಾಲೂಕಾ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಸಹ ಈ ವಿಷಯ ಸಾಕಷ್ಟು ಮುನ್ನೆಲೆಗೆ ಬಂದಿದ್ದು, ಕೃತಕ ಬುದ್ದಿಮತ್ತೆ ಸಂಭವಿನಯ ಕಾಳಜಿಗಳ ಬಗ್ಗೆ ವಿದ್ಯಾಥಿಗಳು ನೆರೆದಿದ್ದವರಿಗೆ ಮನವರಿಕೆ ಮಾಡಿಕೊಟ್ಟರು.
ಶಿಕ್ಷಣ ಮಾತ್ರವಲ್ಲ ಕೃಷಿ, ರಸ್ತೆ ಸಂಚಾರ ಸೇರಿ ವಿವಿಧ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನದ ಬಗ್ಗೆ ಮಕ್ಕಳು ಪ್ರಾಯೋಗಿಕ ಚಟುವಟಿಕೆ ನಡೆಸಿದರು. ಕೃಷಿಭೂಮಿಯಲ್ಲಿ ನೀರಿನ ಅಂಶ ಕಡಿಮೆ ಆದಾಗ ಸೆನ್ಸಾರ್ ಬಳಸಿ ಅದನ್ನು ಗುರುತಿಸುವಿಕೆ ಹಾಗೂ ಸ್ವಯಂ ಚಾಲಿತವಾಗಿ ಬಾವಿ ಬಳಿಯ ಮೋಟರ್ ಚಾಲುವಾಗಿ ಭೂಮಿಗೆ ನೀರುಣಿಸುವಿಕೆಯ ವಿಧಾನವನ್ನು ಚಿಣ್ಣರು ತೋರಿಸಿಕೊಟ್ಟರು. ಶಾಲಾ ಬಸ್ಸು ಹತ್ತುವಾಗ ಮಗು ಜಾರಿಬಿದ್ದ ವಿಷಯ ಅರಿತ ವಿದ್ಯಾರ್ಥಿಯೊಬ್ಬರು ಮಕ್ಕಳು ಬಸ್ಸು ಹತ್ತುವಾಗ ಬಸ್ಸು ಯಾವುದೇ ಕಾರಣಕ್ಕೂ ಮುಂದೆ ಚಲಿಸದಂತೆ ತಂತ್ರಜ್ಞಾನ ರೂಪಿಸಿ ಅದನ್ನು ಪ್ರದರ್ಶಿಸಿದರು.
ಕಾರಿಗೆ ಬೆಂಕಿ ತಗುಲಿದ ಸುದ್ದಿ ಕೇಳಿದ್ದ ವಿದ್ಯಾರ್ಥಿಯೊಬ್ಬರು ಕಾರಿನ ಬಳಿ ಜ್ವಾಲೆ ಪ್ರಜ್ವಲಿಸಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಸ್ವಯಂ ಚಾಲಿತವಾಗಿ ಮೆಸೆಜ್ ಹೋಗುವ ತಂತ್ರಜ್ಞಾನ ಪರಿಚಯಿಸಿದರು. ಇದರೊಂದಿಗೆ ಎಐ ತಂತ್ರಜ್ಞಾನ ಬಳಸಿಕೊಂಡು ಕಾರು ಮಾಲಕರನ್ನು ಜೀವಾಪಾಯದಿಂದ ರಕ್ಷಿಸುವ ವಿಧಾನಗಳನ್ನು ಅವರು ತೋರಿಸಿದರು. ಮನೆಯ ಮೇಲೆ ಸಂಗ್ರಹವಾದ ಮಳೆ ನೀರಿನಿಂದ ವಿದ್ಯುತ್ ಉತ್ಪಾದಿಸಿ, ಅದನ್ನು ಮನೆ ಬಳಕೆಗೆ ಉಪಯೋಗಿಸುವುದನ್ನು ಸಹ ವಿದ್ಯಾರ್ಥಿಯೊಬ್ಬರು ತೋರಿಸಿಕೊಟ್ಟರು.
ಮಕ್ಕಳ ಪ್ರಯೋಗಗಳನ್ನು ನೋಡಿದ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಜಯ ನಾಯಕ ಕಾರ್ಯಕ್ರಮ ಸಂಘಟನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಓಝೋನ್ ದಿನಾಚರಣೆ ಅಂಗವಾಗಿ ನಡೆದ ಆಶು ಭಾಷಣ ಸ್ಪರ್ಧೆಯಲ್ಲಿ ಸಹ ವಿದ್ಯಾರ್ಥಿಗಳು ತಮ್ಮ ಜಾಣ್ಮೆ ಪ್ರದರ್ಶಿಸಿದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಚಾಲಕರಾದ ಎಂ ರಾಜಶೇಖರ ಅವರ ಸಂಘಟನೆಯಲ್ಲಿ ನಡೆದ ಕಾರ್ಯಕ್ರಮ ಹಲವು ವಿಶೇಷಗಳಿಗೆ ಸಾಕ್ಷಿಯಾಗಿದ್ದು, ನೆರೆದಿದ್ದ ಅನೇಕರು ಅಚ್ಚರಿ ವ್ಯಕ್ತಪಡಿಸಿದರು. ಕಳೆದ 20 ವರ್ಷಗಳಿಂದ ಇಂಥಹುದೇ ಚಟುವಟಿಕೆಗಳಲ್ಲಿ ಎಂ ರಾಜಶೇಖರ್ ತೊಡಗಿದ್ದಾರೆ. ಅವರ ಬಳಿ ತರಬೇತಿ ಪಡೆದ ಅನೇಕರು ವಿಜ್ಞಾನ ವಿಷಯವಾಗಿ ಸಾಧನೆ ಮಾಡಿದ್ದು, ಈ ಸಂಘಟನೆಗಳಿ0ದ ಪ್ರೇರಣೆಗೊಂಡ ಮಕ್ಕಳು ಇದೀಗ ವಿವಿಧ ಮಾದರಿಗಳನ್ನು ತಯಾರಿಸಿ ಭವಿಷ್ಯದಲ್ಲಿ ವಿಜ್ಞಾನಿಯಾಗಿ ಹೊರಹೊಮ್ಮುವ ಭರವಸೆ ಮೂಡಿಸಿದ್ದಾರೆ.