ಅಧಿಕಾರಿಗಳ ಬೇಜವಬ್ದಾರಿಯಿಂದ ಅನ್ಯಾಯಕ್ಕೆ ಒಳಗಾದ ಕುಮಟಾದ ವಿಮಲಾ ಶಿರಾಲಿ ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದು, ಈ ಬಗ್ಗೆ ವರದಿ ಸಲ್ಲಿಸುವಂತೆ ಮಾನವ ಹಕ್ಕು ಆಯೋಗ ಉತ್ತರ ಕನ್ನಡ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಗುಜರಿಗಲ್ಲಿ ದೇವಸ್ಥಾನದ ಬಳಿ ವಿಮಲಾ ಶಿರಾಲಿ ವಾಸವಾಗಿದ್ದು, ಅವರಿಗೆ ಸ್ವಂತ ಮನೆಯಿಲ್ಲ. ಜಮೀನು-ಭೂಮಿ ಯಾವುದೂ ಇಲ್ಲ. ಹೀಗಾಗಿ ವಿಮಲಾ ಶಿರಾಲಿ ಅವರ ತಂದೆಯ ಮನೆಯಲ್ಲಿ ಚಿಕ್ಕದೊಂದು ಕೋಣೆಯಲ್ಲಿದ್ದಾರೆ. 67 ವರ್ಷದ ದತ್ತಾತ್ರೇಯ ಶಿರಾಲಿ ಕೈಗೆ ಪೆಟ್ಟಾಗಿದ್ದರೂ ವಾರಕ್ಕೆ ಎರಡು ದಿನ ಬಾಡಿಗೆ ರಿಕ್ಷಾ ಪಡೆದು ಅದನ್ನು ಓಡಿಸಿ ಕುಟುಂಬ ಸಲಹುತ್ತಿದ್ದಾರೆ.
63 ವರ್ಷದ ವಿಮಲಾ ಶಿರಾಲಿ ಅವರು ಮಾಸಿಕ 600 ರೂ ಪಿಂಚಣಿ ಆಸೆಗಾಗಿ ಇಂದಿರಾಗಾoಧಿ ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಗ್ರಾಮ ಆಡಳಿತಾಧಿಕಾರಿ ಚಂದ್ರಶೇಖರ್ ಆ ಯೋಜನೆ ಅವರಿಗೆ ಬಾರದಂತೆ ತಡೆದಿದ್ದರು. ಜೊತೆಗೆ `ಇಂದಿರಾಗಾoಧಿ ವೃದ್ದಾಪ್ಯ ವೇತನಕ್ಕೆ ಯಾಕೆ ಅರ್ಜಿ ಸಲ್ಲಿಸಿದ್ದು? ಸಂಧ್ಯಾ ಸುರಕ್ಷಾಗೆ ಸಲ್ಲಿಸು’ ಎಂದು ತಾಕೀತು ಮಾಡಿದ್ದರು. ಅವರ ಅರ್ಜಿಯನ್ನು ತಹಶೀಲ್ದಾರ್ ವಜಾ ಮಾಡಿದ್ದರು.
ಕಾಲು ಮುರಿದು ಪೆಟ್ಟಾಗಿರುವ ವಿಮಲಾ ಆಚಾರಿ ತಮಗಾದ ಅನ್ಯಾಯದ ಬಗ್ಗೆ ಜನ ಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರಲ್ಲಿ ಹೇಳಿಕೊಂಡಿದ್ದರು. ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ದಾಖಲೆಗಳನ್ನು ಪರಿಶೀಲಿಸಿ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದರು. ಪರಿಣಾಮ ಇದೀಗ ಆಯೋಗದಿಂದ ಜಿಲ್ಲಾಡಳಿತಕ್ಕೆ ಸೂಚನೆ ಬಂದಿದೆ. ಮೇ 3ರ ಒಳಗೆ ಸಮಗ್ರ ವರದಿ ನೀಡುವಂತೆ ಆದೇಶಿಸಲಾಗಿದ್ದು, ಮಾ 5ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ತಪ್ಪು ಮಾಡಿದವರ ವಿರುದ್ಧ ದೂರು ಕೊಡಿ:
`ಅನ್ಯಾಯಕ್ಕೆ ಒಳಗಾದ ಮಹಿಳೆಗೆ ಮಾನವ ಹಕ್ಕು ಆಯೋಗ ನ್ಯಾಯ ಕೊಡಿಸುವ ಭರವಸೆಯಿದೆ. ಇಲ್ಲಿನ ಅಧಿಕಾರಿಗಳು ಬಡವರ ದಿಕ್ಕು ತಪ್ಪಿಸುವ ಕೆಲಸ ಬಿಡಬೇಕು’ ಎಂದು ಆಗ್ನೇಲ್ ರೋಡ್ರಿಗಸ್ ಹೇಳಿದ್ದಾರೆ. `ಸರ್ಕಾರಿ ಸೇವೆಯಲ್ಲಿರುವವರು ಜವಾಬ್ದಾರಿಯಿಂದ ವರ್ತಿಸದೇ ಇದ್ದಾಗ ಜನ ವಿವಿಧ ಕಡೆ ದೂರು ಸಲ್ಲಿಸಬಹುದಾಗಿದ್ದು, ನಮ್ಮ ಕೇಂದ್ರ ಜನ ಸೇವೆಗೆ ಬದ್ಧವಾಗಿದೆ’ ಎಂದವರು ಹೇಳಿದ್ದಾರೆ.