ಯಲ್ಲಾಪುರ: ಕುಡುಕ ಶಿಕ್ಷಕನ ವರದಕ್ಷಿಣೆ ಕಾಟಕ್ಕೆ ಬೇಸತ್ತ ನಂದಿನಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ತುಮಕೂರು ಜಿಲ್ಲೆಯ ನಾಗೇಂದ್ರಪ್ಪ ಕೆ ಶಿರಸಿ ಸೋಮನಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. 2024 ಅಗಸ್ಟ 22ರಂದು ಅವರು ತುಮಕೂರಿನ ನಂದಿನಿ ಬಿ ಎಲ್ ಅವರನ್ನು ವಿವಾಹವಾಗಿದ್ದು, ಮಂಚಿಕೇರಿಯಲ್ಲಿ ಇಬ್ಬರು ಸೇರಿ ಮನೆ ಮಾಡಿಕೊಂಡಿದ್ದರು.
ಕೆಲ ದಿನಗಳ ಕಾಲ ಯೋಗ್ಯ ರೀತಿಯಲ್ಲಿ ಸಂಸಾರ ನಡೆಸಿದ ನಾಗೇಂದ್ರಪ್ಪ ಅವರು ನಂತರ ಕುಡಿತ ಶುರು ಮಾಡಿದರು. ದಿನದಿಂದ ದಿನಕ್ಕೆ ಅವರ ಮದ್ಯ ವ್ಯಸನ ಹೆಚ್ಚಾಗಿದ್ದು, ತವರು ಮನೆಯಿಂದ ಕಾಸು ತರುವಂತೆ ಪತ್ನಿಯನ್ನು ಪೀಡಿಸಲು ಶುರು ಮಾಡಿದರು. ಮೊದಲು ಕಾರು ಖರೀದಿಗೆ ಕಾಸು ಕೊಡುವಂತೆ ಬೇಡಿದರು. ನಂತರ ಮನೆ ನಿರ್ಮಿಸಲು ಹಣ ತರುವಂತೆ ಒತ್ತಾಯಿಸಿದರು.
5 ಲಕ್ಷ ರೂ ಹಣ ತರಲು ಒಪ್ಪದ ಕಾರಣ ನಾಗೇಂದ್ರಪ್ಪ ಅವರು ನಂದಿನಿ ಮೇಲೆ ಕೈ ಮಾಡಿದರು. ನಿತ್ಯ ಮಾನಸಿಕ ಹಿಂಸೆ ಕೊಡುವುದರ ಜೊತೆ ಹೊಡೆಯುವುದು ಸಾಮಾನ್ಯವಾಯಿತು. ನ 23ರ ರಾತ್ರಿ ಮದ್ಯದ ನಶೆಯಲ್ಲಿದ್ದ ನಾಗೇಂದ್ರಪ್ಪ ತವರು ಮನೆಯಿಂದ ಹಣ ಬಾರದ ಕಾರಣ ಪತ್ನಿ ಮೇಲೆ ಕೈ ಮಾಡಿದ್ದು, ಕೊಲೆ ಮಾಡುವುದಾಗಿಯೂ ಬೆದರಿಸಿದರು.
ಈ ಎಲ್ಲಾ ಘಟನೆಗಳಿಂದ ನೊಂದ ನಂದಿನಿ ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ. ಪೀಡಿಸುತ್ತಿರುವ ಪತಿ ವಿರುದ್ಧ ಅವರು ಪೊಲೀಸ್ ದೂರು ನೀಡಿದ್ದಾರೆ. ಮಹಿಳಾ ಪೊಲೀಸ್ ಉಪನಿರೀಕ್ಷಕಿ ನಸ್ರೀನ್ ತಾಜ್ ಚಟ್ಟರಗಿ ನಂದಿನಿಯವರ ಕಥೆ ಕೇಳಿ ಮರುಕ ವ್ಯಕ್ತಪಡಿಸಿದರು. ಸಿಪಿಐ ರಮೇಶ ಹಾನಾಪುರ ಈ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.