ಭಟ್ಕಳದಿಂದ ಕಾರವಾರ ಬರುವ ಬಸ್ಸಿನ ಚಾಲಕರೊಬ್ಬರು ಹಣ ಎಣಿಸುತ್ತಲೇ ಬಸ್ಸು ಓಡಿಸುವ ವಿಡಿಯೋ ಹರಿದಾಡುತ್ತಿದೆ.
ಸಿಬ್ಬಂದಿ ಕೊರತೆ ಹಾಗೂ ಹೊಸ ನೇಮಕಾತಿಗೆ ಆದ್ಯತೆ ನೀಡದ ಕಾರಣ ಅನೇಕ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಚಾಲಕರೇ ನಿರ್ವಾಹಕರಾಗಿದ್ದಾರೆ. ಪ್ರಯಾಣಿಕರಿಗೆ ಟಿಕೆಟ್ ನೀಡಿದ ನಂತರ ಅವರಿಂದ ಹಣಪಡೆದು ಅದನ್ನು ಸಂಸ್ಥೆಗೆ ಪಾವತಿಸುವುದು ಚಾಲಕರ ಜವಾಬ್ದಾರಿಯಾಗಿದೆ. ಈ ಹಣದಲ್ಲಿ ಅಲ್ಪ ವ್ಯತ್ಯಾಸವಾದರೂ ಚಾಲಕರ ಹುದ್ದೆಗೆ ಕುತ್ತು ಖಚಿತ. ಹೀಗಾಗಿ ಪ್ರತಿ ನಿಲ್ದಾಣದಲ್ಲಿಯೂ ಪ್ರಯಾಣಿಕರು ಹತ್ತಿದ ನಂತರ ಅವರಿಂದ ಪಡೆದ ಕಾಸು ಹಾಗೂ ಟಿಕೆಟಿನ ಲೆಕ್ಕಾಚಾರವನ್ನು ಕಡತದಲ್ಲಿ ನಮೂದಿಸಿಕೊಳ್ಳುವುದ ಅನಿವಾರ್ಯ.
ನಷ್ಟದ ಪ್ರಮಾಣ ತಗ್ಗಿಸುವುದು ಹಾಗೂ ಆದಾಯ ವೃದ್ಧಿಗಾಗಿ ಕೆಎಸ್ಆರ್ಟಿಸಿ ಬಸ್ಸಿನ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಭಟ್ಕಳದಿಂದ ಹೊರಟ ಬಸ್ಸಿನಲ್ಲಿ ಸಹ ನಿರ್ವಾಹಕನಿರಲಿಲ್ಲ. ಇದರಿಂದ ಚಾಲಕನೇ ಪ್ರಯಾಣಿಕರಿಂದ ಹಣಪಡೆದಿದ್ದು, ಆ ಹಣವನ್ನು ಎಣಿಸುತ್ತ ಬಸ್ ಓಡಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ. ಹಣ ಎಣಿಸುವ ವೇಳೆ ಚಾಲಕನ ಗಮನ ಬೇರೆಡೆ ಹೋದರೆ ಬಸ್ಸು ಅಪಘಾತ ಸಾಧ್ಯತೆ ಅಲ್ಲಗಳಿಯುವ ಹಾಗಿಲ್ಲ. ಹೀಗಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಆತಂಕವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಬಸ್ಸು ಕಾರವಾರ ತಲುಪಿದ್ದು, ಪ್ರತಿ ನಿಲ್ದಾಣದ ನಂತರವೂ ಚಾಲಕ ಹಣ ಎಣಿಸಿರುವ ಬಗ್ಗೆ ಬಸ್ಸಿನ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಆಗಾಗ ಬಸ್ಸಿನ ಗೇರ್ ಬದಲಿಸುವುದು, ಮತ್ತೆ ಮತ್ತೆ ಹಣ ಎಣಿಸುವುದನ್ನು ನೋಡಿ ಬಸ್ಸಿನ ಒಳಗಿದ್ದವರು ಕಂಗಾಲಾಗಿದ್ದಾರೆ.