ಕಾರವಾರ: `ನಗರಸಭೆ ನಿಯಮಬಾಹಿರವಾಗಿ ಪಾದಚಾರಿಗಳು ಸಂಚರಿಸುವ ಜಾಗ ಅತಿಕ್ರಮಿಸಿ ವ್ಯಾಪಾರಿ ಮಳಿಗೆಗಳನ್ನು ನಿರ್ಮಿಸಿದೆ’ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
`ನಗರದ ಗ್ರೀನ್ಸ್ಟಿಟ್ನಲ್ಲಿ ನಗರಸಭೆ ಕಾನೂನುಬಾಹಿರವಾಗಿ ನೆಲ ಮಹಡಿಯಲ್ಲಿ 18, ಮೊದಲ ಮಹಡಿಯಲ್ಲಿ 20 ಮಳಿಗೆ ನಿರ್ಮಿಸಿ ಬಾಡಿಗೆಗೆ ನೀಡಿದೆ. ಈ ಕಟ್ಟಡವು ಜನರು ಸಂಚರಿಸುವ ಪುಟ್ ಪಾತ್ ಹಾಗೂ ವಾಹನ ನಿಲುಗಡೆ ಸ್ಥಳವಾಗಿತ್ತು’ ಎಂದು ನಗರಸಭೆಯ ಮಾಜಿ ಸದಸ್ಯ ಜಗದೀಶ್ ಬಿರ್ಕೊಡಿಕರ್ ಮತ್ತು ವಿವೇಕಾನಂದ ನಾಯ್ಕ 2006ರಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. `2007ರಲ್ಲಿ ಅಕ್ರಮವಾಗಿ ರಸ್ತೆಯ ಮೇಲೆ ನಗರಸಭೆ ಕಟ್ಟಿದ ಮಳಿಗೆ ಕೆಡವಲು ಸಹ ಕೋರ್ಟ್ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ನಗರಸಭೆ ಪೌರಾಯುಕ್ತರು ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. `ರಸ್ತೆ 62 ಅಡಿ ಇದೆ. ಜನರಿಗೆ ತೊಂದರೆ ಆಗಲ್ಲ’ ಎಂದು ವಾದಿಸಿದ್ದರು. ಆದರೆ ದೂರುದಾರರು `ಗ್ರೀನ್ಸ್ಟಿಟ್ ರಸ್ತೆ 100 ಅಡಿ ಅಗಲವಿದೆ ಎಂದು ಸಿಟಿ ಸರ್ವೆ ಮ್ಯಾಪ್ ದಾಖಲೆಯಲ್ಲಿದೆ. ರಸ್ತೆ ಅತಿಕ್ರಮಿಸಿ, ಪುಟ್ ಪಾತ್ ಇರಬೇಕಾದ ಜಾಗದಲ್ಲಿ 30 ಅಡಿ ಅಗಲ, 600 ಅಡಿ ಉದ್ದಕ್ಕೆ ಅತಿಕ್ರಮಿಸಿ 18 ಮಳಿಗೆಗಳನ್ನು ಕಟ್ಟಲಾಗಿದೆ. ಇದರಲ್ಲಿ ಮಳಿಗೆ ಹಿಂಭಾಗದಲ್ಲಿ ಮಳೆ ನೀರು ಹರಿವ ಚರಂಡಿ ಸಹ ಇದೆ. ಜನ ಸಂಚರಿಸಲು ಆಗದಂತೆ, ವಾಹನ ನಿಲುಗಡೆಗೆ ರಸ್ತೆ ಬದಿಯಲ್ಲಿ ಜಾಗ ಬಿಡದೆ, ಮಳಿಗೆ ಕಟ್ಟಿ ವ್ಯಾಪಾರಸ್ಥರಿಗೆ ನೀಡಲಾಗಿದೆ. ಗ್ರೀನ್ಸ್ಟಿಟ್ ರಸ್ತೆಯಲ್ಲಿ ಎಚ್ಎಂಟಿ ಮಳಿಗೆ, ಉಡುಪಿ ಆಯುರ್ವೇದ ಅಂಗಡಿ, ಸ್ವೀಟ್ಮಾರ್ಟ್ ಹಳೆಯ ಮಳಿಗೆ ಇದ್ದ ನೆಪ ಒಡ್ಡಿ ಕೋರ್ಟ್ಗೆ ನಗರಸಭೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಿ, ಗ್ರೀನ್ಸ್ಟ್ರೀಟ್ನಲ್ಲಿ ಗ್ರೌಂಡ್ ಹಾಗೂ ಮೊದಲ ಮಹಡಿ ಸಹಿತ 38 ಮಳಿಗೆಗಳನ್ನು ಕಟ್ಟಿದ್ದನ್ನು ನಗರಸಭೆಯವರು ಸಮರ್ಥಿಸಲು ಹೊರಟಿದ್ದರು. ಇದು ಕಾನೂನು ಬಾಹಿರ ಕೃತ್ಯ’ ಎಂದು ದೂರುದಾರರ ಪರ ವಕೀಲರಾದ ಬಿ.ಎಸ್.ಪೈ., ವಕೀಲ ಎಸ್.ವೈ.ಶೆಜವಾಡಕರ್ ವಾದಿಸಿದ್ದರು.
ದೂರುದಾರರ ವಾದ ಎತ್ತಿ ಹಿಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನಗರಸಭೆ ನಿರ್ಣಯದ ವಿರುದ್ಧ ತೀರ್ಪು ಪ್ರಕಟಿಸಿದ್ದಾರೆ. ಗ್ರೀನ್ಸ್ಟ್ರೀಟ್ನಲ್ಲಿ ನಗರ ಸಭೆ ಮಳಿಗೆ ನಿರ್ಮಿಸಲು 2004 ನವೆಂಬರ್ನಲ್ಲಿ ನಿರ್ಣಯ ಅಂಗೀಕರಿಸಿತ್ತು. ಅಲ್ಲದೆ ನಗರಸಭೆ ನಿರ್ಣಯಕ್ಕೂ ಮುನ್ನ 2004 ಪತ್ರಿಕೆಯೊಂದರಲ್ಲಿ ವ್ಯಾಪಾರಿ ಮಳಿಗೆ ಕಟ್ಟಡ ನಿರ್ಮಿಸಲು ಟೆಂಡರ್ ಕರೆದಿತ್ತು. ಈ ಅಂಶಗಳನ್ನು ಕೋರ್ಟ ಗಮನಿಸಿತ್ತು.