ಯಲ್ಲಾಪುರ: ಕೋಣ ಹಾಗೂ ಎತ್ತುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಮೈಸೂರಿನ ಸದ್ದಾಂ ಹುಸೇನ್ ಹಾಗೂ ಚಿತ್ರದುರ್ಗದ ಇಸ್ಮಾಯಲ್ ಎಂಬಾತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಸೆ 25ರಂದು ಪಟ್ಟಣದ ರೋಜರಿ ಶಾಲೆ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆಗ ಅನುಮಾನಾಸ್ಪದವಾಗಿ ಕಾಣಿಸಿದ ಅಶೋಕ ಲೈಲಾಂಡ್ ಲಾರಿಗೆ ಕೈ ಮಾಡಿದರು. ಲಾರಿ ಚಾಲಕ ಗಲಿಬಿಲಿಗೊಂಡಿದ್ದು, ವಾಹನದ ಒಳಗೆ ಗಮನಿಸಿದಾಗ ಅದರಲ್ಲಿ 13 ಕೋಣಗಳು ಹಾಗೂ 4 ಎತ್ತುಗಳನ್ನು ಸಾಗಿಸುತ್ತಿರುವುದು ಕಾಣಿಸಿತು. 2-3 ವರ್ಷದೊಳಗಿನ ಕೋಣ ಹಾಗೂ 4 ವರ್ಷದೊಳಗಿನ ಎತ್ತುಗಳನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಸಾಗಿಸಲಾಗುತ್ತಿರುವುದನ್ನು ಅರಿತ ಪೊಲೀಸರು ಅವುಗಳನ್ನು ಬಿಡುಗಡೆ ಮಾಡಿದರು.
ಬೆಳಗಾವಿ ಜಿಲ್ಲೆಯ ಕಿತ್ತೂರಿನಿಂದ ಕೇರಳ ರಾಜ್ಯದ ಕಾಸರಗೋಡಿಗೆ ಈ ಪ್ರಾಣಿಗಳು ಸಾಗಾಟವಾಗುತ್ತಿದ್ದವು. ಆದರೆ, ಈ ಜಾನುವಾರು ಸಾಗಾಟಕ್ಕೆ ಯಾವುದೇ ಪರವಾನಿಗೆ ಇರಲಿಲ್ಲ. ಹೀಗಾಗಿ ಪಿಎಸ್ಐ ಸಿದ್ದಪ್ಪ ಗುಡಿ ಅದನ್ನು ವಶಕ್ಕೆ ಪಡೆದರು. ಮೈಸೂರಿನ ಸದ್ದಾಂ ಹುಸೇನ್ ಹಾಗೂ ಚಿತ್ರದುರ್ಗದ ಇಸ್ಮಾಯಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಈ ಪ್ರಕರಣವನ್ನು ಪಿಎಸ್ಐ ಮಹಾವೀರ ಕಾಂಬ್ಳೆ ತನಿಖೆ ನಡೆಸಲಿದ್ದಾರೆ.