ಕುಮಟಾ: ಐಗಳಕೂರ್ವೆ ಸೇತುವೆ ಬಳಿಯ ಅಘನಾಶಿನಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಅಲ್ಲಿಂದ ಮರಳು ಸಾಗಿಸುತ್ತಿದ್ದ ವಾಹನವನ್ನು ಪೊಲೀಸ್ ನಿರೀಕ್ಷಕ ಯೋಗೀಶ ಕೆ ಎಂ ಪತ್ತೆ ಹಚ್ಚಿದ್ದಾರೆ.
ಅಕ್ಟೊಬರ್ 9ರ ರಾತ್ರಿ 1 ಗಂಟೆಗೆ ಪೊಲೀಸರು ಗಸ್ತು ತಿರುಗುತ್ತಿದ್ದರು. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ದಿವಿಗಿ ಹರಗಡೆ ಕ್ರಾಸಿನ ಬಳಿ ಲಾರಿಯಿಂದ ನೀರು ಸೋರುತ್ತಿರುವುದನ್ನು ಗಮನಿಸಿದರು. ಆ ಲಾರಿಯನ್ನು ನಿಲ್ಲಿಸಿದಾಗ ಅದರಲ್ಲಿ ಮರಳು ಸಾಗಾಟ ಮಾಡುತ್ತಿರುವುದು ಕಂಡು ಬಂದಿತು. ಹೊನ್ನಾವರದ ಹೊದ್ಕೆಶಿರೂರಿನ ಮಾರುತಿ ಮಹಾದೇವ ನಾಯ್ಕ (31) ತಮ್ಮ ಲಾರಿಯಲ್ಲಿ ಮಿರ್ಜಾನಿನ ಸಂತೋಷ ನಾರಾಯಣ ಪಟಗಾರ (31) ಎಂಬಾತರ ಜೊತೆ ಸೇರಿ ಮರಳು ಸಾಗಾಟ ಮಾಡುತ್ತಿದ್ದರು. ಆಗ, ಮರಳು ಸಾಗಾಟ ಮಾಡಲು ಪಡೆದ ಪರವಾನಿಗೆ ಪ್ರತಿ ತೋರಿಸುವಂತೆ ಪೊಲೀಸರು ಕೇಳಿದರು.
ಆಗ, `ತಮ್ಮ ಬಳಿ ಯಾವುದೇ ಪರವಾನಿಗೆ ಇಲ್ಲ’ ಎಂದು ವಾಹನ ಮಾಲಕ ಮಾರುತಿ ಹೇಳಿದ್ದು ಪೊಲೀಸರು ಆ ಮರಳನ್ನು ವಶಕ್ಕೆ ಪಡೆದರು. `ಮರಳನ್ನು ಎಲ್ಲಿಂದ ತಂದಿದ್ದು?’ ಎಂದು ಪೊಲೀಸರು ಪ್ರಶ್ನಿಸಿದಾಗ ಚಾಲಕ `ಐಗಳಕೂರ್ವೆ ಸೇತುವೆ ಬಳಿ ಕಾರ್ಮಿಕರು ಮರಳು ತುಂಬಿಕೊಟ್ಟಿದ್ದಾರೆ’ ಎಂದು ಉತ್ತರಿಸಿದ್ದರಿಂದ ಆ ಬಗ್ಗೆಯೂ ಪೊಲೀಸರು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದರು.
ಪರವಾನಿಗೆ ಇಲ್ಲದೇ ಮರಳು ಸಾಗಾಟ ಅಪರಾಧವಾಗಿದ್ದು, ಸರ್ಕಾರಿ ಸ್ವತ್ತಾದ ಖನಿಜವನ್ನು ಅಕ್ರಮವಾಗಿ ಸಾಗಿಸಿದ ಹಿನ್ನಲೆ ಚಾಲಕ ಹಾಗೂ ಮಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡರು.