ಕುಮಟಾ: ಮೀನುಗಾರಿಕೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದ ಸುರ್ಯಕಾಂತ ನಾಯ್ಕ ಎಂಬಾತರ ಮರಣದ ನಂತರ ಅವರ ಪತ್ನಿ ಸುಶೀಲಾ ನಿವೃತ್ತಿ ವೇತನ ಪಡೆಯುತ್ತಿದ್ದು, `ಅದನ್ನು ತನ್ನ ಅಂಗವಿಕಲ ಮಗನಿಗೆ ವರ್ಗಾಯಿಸಿ’ ಎಂದು 80 ವರ್ಷದ ಸುಶೀಲಾ ನಾಯ್ಕ ಕಚೇರಿ ಅಲೆದಾಟ ನಡೆಸುತ್ತಿದ್ದಾರೆ. ಅಧಿಕಾರಿಗಳ ಸಲಹೆ ಮೇರೆಗೆ ಅವರು ವಂಶವೃಕ್ಷ ಪಡೆಯಲು ಸಾವಿರಾರು ರೂ ವೆಚ್ಚ ಮಾಡಿ ಅಪಡಾವಿಟ್ ಜೊತೆ ಹಲವು ದಾಖಲೆ ಸಲ್ಲಿಸಿದರೂ ಸುಶೀಲಾ ಅವರ ಕೋರಿಕೆ ಈಡೇರಿಲ್ಲ!
ಜನತಾ ಪ್ಲಾಟಿನಲ್ಲಿ ವಾಸವಿರುವ ಸುಶೀಲಾ ಅವರು ತನ್ನ ಮಗನಿಗೆ ಅನುಕೂಲವಾಗಲಿ ಎಂದು ವಂಶವೃಕ್ಷ ಮಾಡಿಕೊಡಲು ಓಡಾಟ ನಡೆಸಿದ್ದಾರೆ. ಆದರೆ, ಅವರು ಅಪಡಾವಿಟ್ ಮೂಲಕ ಕುಟುಂಬ ಸದಸ್ಯರ ದಾಖಲೆ ಒದಗಿಸಿದರೂ ದಾಖಲೆ ಒದಗಿಸಿಲ್ಲ ಎಂಬ ನೆಪವೊಡ್ಡಿ ಅವರ ಅರ್ಜಿ ತಿರಸ್ಕರಿಸಲಾಗಿದೆ. `ತಹಶೀಲ್ದಾರ್ ಕಚೇರಿಯ ಲೋಪಗಳಿಂದ ತಮಗೆ ಅನ್ಯಾಯವಾಗಿದೆ’ ಎಂದು ಸುಶೀಲಾ ಅವರು ಇದೀಗ ಉಪವಿಭಾಗಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
`ಕುಮಟಾದಲ್ಲಿ ತಹಶೀಲ್ದಾರ್ ನೇಮಕ ಆಗಿಲ್ಲ. ಇದರಿಂದ ಸಾರ್ವಜನಿಕರು ತಮಗಾದ ಅನ್ಯಾಯದ ವಿರುದ್ಧ ಪದೇ ಪದೇ ಉಪವಿಭಾಗಾಧಿಕಾರಿಗಳಿಗೆ ದೂರು ನೀಡುವ ಸ್ಥಿತಿ ಬಂದಿದೆ. ವೃದ್ಧೆಗೆ ಅನ್ಯಾಯ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ಸ್ ಒತ್ತಾಯಿಸಿದರು.