ಪ್ರಗತಿಪರ ರೈತರಿಗೆ ಉತ್ತೇಜನ ನೀಡುವುದರ ಜೊತೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪಶು ಸಂಗೋಪನಾ ಇಲಾಖೆ ವಿನೂತನ ಮಾದರಿಯ ಸ್ಪರ್ಧೆ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು ನೋಂದಾಯಿಸಲು ಫೆಬ್ರವರಿ 5 ಕೊನೆ ದಿನ.
ಯಲ್ಲಾಪುರ ತಾಲೂಕು ವ್ಯಾಪ್ತಿಯಲ್ಲಿ ಈ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಜಾನುವಾರುಗಳನ್ನು ಪಟ್ಟಣಕ್ಕೆ ತರಬೇಕಾಗಿಲ್ಲ. ಹಾಲು ಕರೆಯುವ ಸಮಯಕ್ಕೆ ಅಧಿಕಾರಿಗಳು ಭೇಟಿ ನೀಡಿ ಮೌಲ್ಯ ಮಾಪನ ಮಾಡಲಿದ್ದಾರೆ. ಬೆಳಗ್ಗೆ ಹಾಗೂ ಸಂಜೆ ವೇಳೆ ಅಧಿಕಾರಿಗಳ ಜೊತೆ ನಿರ್ಣಾಯಕರು ಸಹ ಕೊಟ್ಟಿಗೆಗೆ ಭೇಟಿ ನೀಡಿ ಸ್ಪರ್ಧೆ ನಡೆಸಿಕೊಡಲಿದ್ದಾರೆ. ಆ ಮೂಲಕ ಹಸು-ಎಮ್ಮೆಗಳ ಹಾಲಿನ ಪ್ರಮಾಣ ಹಾಗೂ ಗುಣಮಟ್ಟ ಅಳತೆಗೆ ಪಶು ಇಲಾಖೆ ಸಿದ್ಧತೆ ನಡೆಸಿದೆ.
ಎಲ್ಲವೂ ಅಂದುಕೊoಡoತೆ ನಡೆದರೆ ಫೆಬ್ರವರಿ 7ರಿಂದ ಮೂರು ದಿನಗಳ ಕಾಲ ಈ ಸ್ಪರ್ಧೆ ನಡೆಯಲಿದೆ. ಜೊತೆಗೆ ಸ್ಪರ್ಧೆ ಮುಗಿದ ಮುಂದಿನ ವಾರವೇ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಸ್ಪರ್ಧೆಯಲ್ಲಿ 5 ವಿಭಾಗಗಳಿದ್ದು, ಪ್ರತಿ ವಿಭಾಗಗಳಿಗೂ ಮೂರು ಬಹುಮಾನಗಳಿವೆ.
ಮಲೆನಾಡು ಗಿಡ್ಡ ತಳಿಯ ಹಸುಗಳನ್ನು ಸಾಕಿದವವರ ನಡುವೆ ಒಂದು ವಿಭಾಗದ ಸ್ಪರ್ಧೆ ನಡೆಯಲಿದೆ. ಎಮ್ಮೆಗಳನ್ನು ಸಾಕಿದವರಿಗಾಗಿ ಇನ್ನೊಂದು ವಿಭಾಗದ ಸ್ಪರ್ಧೆ ನಡೆಯಲಿದೆ. ಜರ್ಸಿ, ಎಚ್ಎಫ್ ಹಾಗೂ ಮಿಶ್ರ ತಳಿ ಜಾನುವಾರುಗಳನ್ನು ಸಾಕಿ ಹೈನುಗಾರಿಕೆ ನಡೆಸುವವರಿಗೆ ಇನ್ನೊಂದು ವಿಭಾಗವಿದೆ. ಒಬ್ಬ ವ್ಯಕ್ತಿ ಒಂದು ಜಾನುವಾರು ಜೊತೆ ಒಂದೇ ವಿಭಾಗದಲ್ಲಿ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.
ಇನ್ನೂ ಹಾಲು ಕರೆಯುವ ಸ್ಪರ್ಧೆ ಸ್ಪರ್ಧೆಗೆ ಮಾತ್ರ ಸೀಮಿತವಾಗಿಲ್ಲ. ಹಾಲಿನ ಉತ್ಪಾದನೆ ಹೆಚ್ಚಳ, ಹೈನುಗಾರಿಕೆ ಸಮಸ್ಯೆ-ಪರಿಹಾರ, ಪೌಷ್ಠಿಕ ಆಹಾರ ವಿತರಣೆ, ವಿವಿಧ ರೋಗ ಹಾಗೂ ಅದನ್ನು ವಾಸಿಪಡಿಸುವ ವಿಧಾನ ಸೇರಿ ಪಶು ವೈದ್ಯಕೀಯ ಪ್ರಶ್ನೆಗಳಿಗೆ ಸಹ ಹೈನುಗಾರರಿಗೆ ಉತ್ತರ ಸಿಗಲಿದೆ.
ಹಾಲು ಹಿಂಡುವ ಸ್ಪರ್ಧೆಯಲ್ಲಿ ಹೆಸರು ನೊಂದಾಯಿಸಲು ಇಲ್ಲಿ ಫೋನ್ ಮಾಡಿ:
8971161277, 9916284949, 9035011598