ಸಾಮಾಜಿಕ ಜಾಲತಾಣದಲ್ಲಿ ಬರುವ ಯುವತಿಯರ ಫೋಟೋವನ್ನು ಕೆಲ ಕಿಡಿಗೇಡಿಗಳು ದುರುಪಯೋಗಪಡಿಸಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೇ ವ್ಯಾಪಕ ಚರ್ಚೆ ನಡೆಯುತ್ತಿದೆ.ಪ್ರಮುಖ ಜಾಲತಾಣವಾದ ಇನ್ಸ್ಟಾಗ್ರಾಮಿನಲ್ಲಿ ಯುವತಿಯರ ಫೋಟೋಗಳು ದುರುಪಯೋಗವಾಗುತ್ತಿದೆ. ಅದರಲ್ಲಿಯೂ ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಮುದಾಯದ ಯುವತಿಯರ ಫೋಟೋಗಳನ್ನು ಗುರಿಯಾಗಿರಿಸಿಕೊಂಡು ಹರೀಶ್ ಭಟ್ಟ ಎಂಬಾತ ಅಶ್ಲೀಲ ಸಂದೇಶಗಳನ್ನು ಬರೆಯುತ್ತಿದ್ದಾನೆ. ಅಸಲಿಗೆ ಈ ಹರೀಶ್ ಭಟ್ಟ ಯಾರು? ಎಂದು ಯಾರಿಗೂ ಗೊತ್ತಿಲ್ಲ.
ಇದಲ್ಲದೇ ಹರೀಶ್ ಭಟ್ಟ ಎಂಬ ಖಾತೆಯಲ್ಲಿ ಲಿಂಕ್ ಇರುವ `ಥ್ರೆಡ್ಸ್’ ಆಫ್ ಪ್ರವೇಶಿಸಿದರೆ ಅಲ್ಲಿ ಸಹ ನೂರಾರು ಯುವತಿಯರ ಫೋಟೋ ಹಾಗೂ ಅವರ ಕುರಿತಾಗಿನ ಕೆಟ್ಟ ಬರಹಗಳು ಕಾಣುತ್ತಿವೆ. ರೂಪದರ್ಶಿಗಳ ಫೋಟೋ ಪ್ರಕಟಿಸುವ ಪ್ರಮುಖ ಸಮುದಾಯದ ಹೆಸರಿನಲ್ಲಿರುವ ಇನ್ಸ್ಟಾಗ್ರಾಮಿನ ಪೇಜ್ ಸಹ ಅಶ್ಲೀಲವಾಗಿ ವರ್ತಿಸುವ ಹರೀಶ್ ಭಟ್ಟ ಎಂಬಾತನನ್ನು ಹಿಂಬಾಲಿಸುತ್ತಿದೆ. ಆ ಸಮುದಾಯದ ಹೆಸರಿನಲ್ಲಿರುವ ಪೇಜ್’ನ ಅಡ್ಮಿನ್ ಯಾರು ಎಂಬುದು ಸಹ ಈವರೆಗೂ ಯಾರಿಗೂ ಗೊತ್ತಿಲ್ಲ. ಹೀಗಾಗಿ ಆ ಪೇಜ್ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿದೆ.
`ಹರೀಶ್ ಭಟ್ಟ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದ ಕಿಡಿಗೇಡಿಗಳು ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಆ ಸಮುದಾಯದ ಯುವತಿಯರ ಬಗ್ಗೆ ಕೆಟ್ಟದಾಗಿ ಬಿಂಬಿಸುತ್ತಿದ್ದು, ಹರೀಶ್ ಭಟ್ಟ ಎಂಬಾತನ ನಕಲಿ ಖಾತೆಯನ್ನು ನಿಷೇಧಿಸಬೇಕು’ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
Discussion about this post