ಭೂ ಕುಸಿತದಿಂದ ರಸ್ತೆ ಸಂಪರ್ಕ ಕಲ್ಪಿಸಿಕೊಂಡಿರುವ ಶಿರಸಿ ಮತ್ತಿಘಟ್ಟಾ ಸಮೀಪದ ಕೆಳಗಿನಕೇರಿ ಹಾಗೂ ಸುತ್ತಲಿನ ಜನ ತಮ್ಮ ಊರಿಗೆ ಜಿಲ್ಲಾಧಿಕಾರಿಗಳನ್ನು ಆಮಂತ್ರಿಸಿದ್ದಾರೆ. `ತಮ್ಮ ಊರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಿ’ ಎಂದು ಅಲ್ಲಿನವರು ಅಳಲು ತೋಡಿಕೊಂಡಿದ್ದಾರೆ.
ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತ್ರತ್ವದಲ್ಲಿ ಮತ್ತಿಘಟ್ಟಾ ಭಾಗದ ಜನ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಿದರು. ಜಿಲ್ಲಾಧಿಕಾರಿ ಕೆ ಲಕ್ಷಿö್ಮÃಪ್ರಿಯಾ ಅವರನ್ನು ಭೇಟಿ ಮಾಡಿ, ಊರಿನ ಸಮಸ್ಯೆಗಳ ಪಟ್ಟಿ ನೀಡಿದರು. ಮುಖ್ಯವಾಗಿ ಮಳೆಗಾಲದಲ್ಲಿ ಅಲ್ಲಿನ ಜನ ಅನುಭವಿಸುತ್ತಿರುವ ಸಂಕಷ್ಟಗಳ ಸರಮಾಲೆಗಳ ಬಗ್ಗೆ ವರದಿ ಮಾಡಿದರು.
`ಕಳೆದ ಎರಡು ವರ್ಷಗಳಿಂದ ಸತತ ಭೂಕುಸಿತದ ಪರಿಣಾಮವಾಗಿ ಈ ಪ್ರದೇಶದ ಸಂಪರ್ಕ ಕೊಂಡಿಯಾಗಿರುವ ರಸ್ತೆ ಹಾಳಾಗಿದೆ. ಕಳೆದ ಮಳೆಗಾಲದಲ್ಲಿ 15 ದಿನ ಊರಿನ ಸಂಪರ್ಕ ಕಡಿತವಾಗಿದ್ದು, ಶಾಸಕರು ಸೇರಿ ಯಾವ ಜನಪ್ರತಿನಿಧಿಯೂ ಸಮಸ್ಯೆ ಆಲಿಸಿಲ್ಲ. ಅದಾಗಿಯೂ ಗ್ರಾಮಸ್ಥರೇ ತುರ್ತು ರಸ್ತೆ ದುರಸ್ಥಿ ನಡೆಸಿ ಓಡಾಡುತ್ತಿದ್ದಾರೆ’ ಎಂದು ಅನಂತಮೂರ್ತಿ ಹೆಗಡೆ ವಿವರಿಸಿದರು.
`ರಸ್ತೆ ಇಲ್ಲದ ಕಾರಣ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಮಸ್ಯೆಯಾಗಿದೆ. ಪಡಿತರ ತರಲು ಆಗುತ್ತಿಲ್ಲ. ಮಳೆಗಾಲದಲ್ಲಿ ಮತ್ತೆ ರಸ್ತೆ ಕುಸಿಯುವ ಆತಂಕವೂ ಇದೆ’ ಎಂದು ಕೆಳಗಿನಕೇರಿ ಗ್ರಾಮದ ರೇಣುಕಾ ಸಿದ್ದಿ ಹೇಳಿದರು. `ಇಲ್ಲಿರುವ 38 ಕುಟುಂಬಗಳಿಗೆ ರಸ್ತೆ ನಿರ್ಮಿಸಿಕೊಡಬೇಕು. ಭೂ ಕುಸಿತ ತಡೆಗೆ ತಡೆಗೋಡೆ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
`ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು. ಜೊತೆಗೆ ಉಸ್ತುವಾರಿ ಸಚಿವರನ್ನು ಕರೆತರಬೇಕು’ ಎಂದು ಮನವಿ ಮಾಡಿದರು. ಬಿಜೆಪಿ ಪ್ರಮುಖರಾದ ಶ್ರೀಕಾಂತ ಬಳ್ಳಾರಿ, ರಮೇಶ ನಾಯ್ಕ ಕುಪ್ಪಳ್ಳಿ, ಉಷಾ ಹೆಗಡೆ, ಜಯಭಾರತಿ ಭಟ್ಟ, ನಾರಾಯಣ ಹೆಗಡೆ, ಗಣಪತಿ ಸಿದ್ದಿ ಈ ನಿಯೋಗದಲ್ಲಿದ್ದರು.