ಭಟ್ಕಳ: ಅಂಡರ್ಪಾಸ್ ನಿರ್ಮಿಸದೇ ರಾಷ್ಟ್ರೀಯ ಹೆದ್ದಾರಿ ಅಗಲೀಕರನ ನಡೆಸುತ್ತಿರುವ ಐಆರ್ಬಿ ಕಂಪನಿ ವಿರುದ್ಧ ಭಟ್ಕಳದ ಜನ ಪ್ರತಿಭಟನೆ ನಡೆಸಿದ್ದಾರೆ. ಕೈಕಿಣಿ ಗ್ರಾಪಂ ಬಸ್ತಿ ವ್ಯಾಪ್ತಿಯಲ್ಲಿ ಅಂಡರ್ಪಾಸ್ ನಿರ್ಮಾಣಕ್ಕಾಗಿ ಆ ಭಾಗದವರು ಬುಧವಾರ ಪಟ್ಟುಹಿಡಿದರು.
ಬೆಳಗ್ಗೆ ಬಸ್ತಿ ಉತ್ತರಕೊಪ್ಪ ಕ್ರಾಸ್ನಲ್ಲಿ ಜಮಾಯಿಸಿದ ಜನ ಕಾಮಗಾರಿ ನಡೆಸಲು ಅಡ್ಡಿಪಡಿಸಿದರು. `ರೈತರು ತಮ್ಮ ಭೂಮಿಗೆ ತೆರಳಲು ನಿತ್ಯ ಈ ಹೆದ್ದಾರಿ ದಾಟಬೇಕು. ಆಗ ಅಪಘಾತದ ಸಾಧ್ಯತೆ ಹೆಚ್ಚಿದ್ದು, ಇದನ್ನು ತಪ್ಪಿಸಲು ಅಂಡರ್ ಪಾಸ್ ಅಗತ್ಯ’ ಎಂದು ಪ್ರತಿಪಾಧಿಸಿದರು.
`ಶಾಲೆ, ಸ್ಮಶಾನಕ್ಕೆ ತೆರಳಲು ಬೇರೆ ದಾರಿಯಿಲ್ಲ. ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಳೆದ 7-8 ವರ್ಷಗಳಿಂದ ಅಂಡರ್ ಪಾಸ್ ನಿರ್ಮಿಸುವಂತೆ ಆಗ್ರಹಿಸಲಾಗುತ್ತಿದೆ. ಆದರೆ, ಯಾರೂ ಸ್ಥಳೀಯರ ಮಾತು ಆಲಿಸಿಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು. `ಯಾವುದೇ ಕಾರಣಕ್ಕೂ ಅಂಡರ್ ಪಾಸ್ ಇಲ್ಲದೇ ಹೆದ್ದಾರಿ ಅಗಲೀಕರಣ ಕಾಮಗಾರಿ ಮುಂದುವರೆಸಲು ಬಿಡುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಜನರ ಆಕ್ರೋಶದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿವಕುಮಾರ, `ಅಂಡರ್ಪಾಸ್ ನಿರ್ಮಾಣವನ್ನು ಮುಂದಿನ ಹಂತದಲ್ಲಿ ಖಂಡಿತವಾಗಿ ತೆಗೆದುಕೊಳ್ಳಲಾಗುವುದು’ ಎಂಬ ಭರವಸೆ ನೀಡಿದರು. ಆದರೆ, ಇದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ.
ಸಹಾಯಕ ಆಯುಕ್ತೆ ಡಾ.ನಯನಾ, ತಹಸೀಲ್ದಾರ ಅಶೋಕ ಭಟ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಬೇಡಿಕೆಯನ್ನು ಆಲಿಸಿದರು. `ಆಗಲೂ ಐಆರ್ಬಿ ಕಂಪನಿ ಮೇಲೆ ವಿಶ್ವಾಸವಿಲ್ಲ’ ಎಂದು ಅಲ್ಲಿದ್ದವರು ಹೇಳಿದರು. `ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗುವುದು’ ಎಂದು ಅಧಿಕಾರಿಗಳು ಹೇಳಿದರು.