ಶಿರಸಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಬ್ಬಿಣದ ಪೈಪ್ ಕಳ್ಳತನ ವಿಷಯವಾಗಿ ಬುಧವಾರ ಕಾಂಗ್ರೆಸ್ ಪ್ರತಿಭಟಿಸಿದ್ದು, ಗುರುವಾರ ಬಿಜೆಪಿ ಸಹ ಪ್ರತಿಭಟನೆ ನಡೆಸಿದೆ.
ಜೊತೆಗೆ ನಗರಸಭೆಗೆ ಚುನಾಯಿತರಾದ ಬಿಜೆಪಿ ಸದಸ್ಯರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಅವರ ಸದಸ್ಯತ್ವ ರದ್ಧುಪಡಿಸುವುದಾಗಿಯೂ ಬಿಜೆಪಿ ಭರವಸೆ ನೀಡಿದೆ. `ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನು ಜೈಲಿಗೆ ಕಳುಹಿಸಬೇಕು’ ಎಂದು ಬಿಜೆಪಿಗರು ಗುಡುಗಿದ್ದಾರೆ.
ಸಹಾಯಕ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಬಿಜೆಪಿ ನಗರ ಘಟಕ ಮತ್ತು ನಗರಸಭೆ ಸದಸ್ಯ ಆನಂದ ಸಾಲೇರ ಈ ಬಗ್ಗೆ ಮಾಹಿತಿ ನೀಡಿದರು. `ಕೆಂಗ್ರೆನಾಲಾದಿAದ ನಗರಸಭೆಗೆ ಸೇರಿದ ಬೀಡು ಕಬ್ಬಿಣದ ಹಳೆಯ ಪೈಪ್ ಕಳ್ಳತನ ಆಗಿರುವ ಪ್ರಕರಣವನ್ನು ಭೇದಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುಬೇಕು’ ಎಂದು ಅವರು ಆಗ್ರಹಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾ ಮುಖಂಡ ನಂದನ ಸಾಗರ ಮಾತನಾಡಿ `ಈ ಪ್ರಕರಣದಲ್ಲಿ ಬಿಜೆಪಿ ಸದಸ್ಯರಿದ್ದರೆ ಯಾವುದೇ ಮುಲಾಜಿಲ್ಲದೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತೇವೆ. ಪೊಲೀಸರ ತನಿಖೆಗೂ ಸಹಕಾರ ನೀಡುತ್ತೇವೆ’ ಎಂದು ಘೋಷಿಸಿದರು. `ಈ ಕಳ್ಳತನ ಪ್ರಕರಣದಿಂದ ನಗರಸಭೆ ಹಾಗೂ ಅಲ್ಲಿನ ಸಜ್ಜನ ಸದಸ್ಯರಿಗೂ ಇರುಸು-ಮುರುಸಾಗಿದೆ’ ಎಂದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್ಟ, ನಗರಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ ಸೇರಿ ಅನೇಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.