ಶಿರಸಿಗೆ ಕುಡಿಯುವ ನೀರು ಪೂರೈಸುತ್ತಿದ್ದ ಕಬ್ಬಿಣದ ಪೈಪ್ ಕಳ್ಳತನ ವಿಷಯ ಸಾಕಷ್ಟು ಚರ್ಚೆ ನಡೆಯುತ್ತಿದೆ. `ತನಿಖೆಯ ದಿಕ್ಕು ತಪ್ಪಿಸಲು ಪೊಲೀಸರಿಗೆ ಪ್ರಭಾವಿಗಳ ಒತ್ತಡವಿದೆ’ ಎಂಬ ಗುಸು ಗುಸು ನಗರದಲ್ಲಿ ದಟ್ಟವಾಗಿದೆ. ಈ ಹಿನ್ನಲೆ `ನಮಗೆ ಯಾರ ಒತ್ತಡವೂ ಇಲ್ಲ. ಯಾವ ಒತ್ತಡಕ್ಕೂ ಮಣಿಯುವುದಿಲ್ಲ’ ಎಂದು ಡಿವೈಎಸ್ಪಿ ಕೆ ಎಲ್ ಗಣೇಶ ಸ್ಪಷ್ಠಪಡಿಸಿದ್ದಾರೆ.
ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಗರಸಭೆಯ ಕೆಲ ಕಾಂಗ್ರೆಸ್ ಸದಸ್ಯರು ಬುಧವಾರ ಧಿಡೀರ್ ಭೇಟಿ ನೀಡಿದರು. ಕುಡಿಯುವ ನೀರಿನ ಕೆಂಗ್ರೆ ನಾಲಾದ ಬೀಡು ಕಬ್ಬಿಣದ ಹಳೆಯ ಪೈಪುಗಳು ಕಳವು ಆದ ಪ್ರಕರಣದ ತನಿಖೆಯ ಪ್ರಗತಿ ಬಗ್ಗೆ ಪ್ರಶ್ನಿಸಿದರು. ಕಾಂಗ್ರೆಸ್ ಮುಖಂಡ ಜಗದೀಶ ಗೌಡ ಮಾತನಾಡಿ ಎಫ್ಐಆರ್ ಆಗಿ ಒಂದು ವಾರ ಕಳೆದರೂ ತಪ್ಪಿತಸ್ಥರನ್ನು ಬಂಧಿಸದ ಬಗ್ಗೆ ಅನುಮಾನವ್ಯಕ್ತಪಡಿಸಿದರು.
ಈ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನ ನಡೆದಿದೆಯಾ? ಪ್ರಭಾವಿ ರಾಜಕಾರಣಿಗಳ ಒತ್ತಡ ನಿಮ್ಮ ಮೇಲೆ ಇದೆಯಾ? ಕೇವಲ ಕಳ್ಳತನಕ್ಕೆ ಬಳಸಿದ ಜೆಸಿಬಿ ಮತ್ತು ಕ್ರೇನ್ ವಶಪಡಿಸಿಕೊಂಡು ಪ್ರಮುಖ ಆರೋಪಿಗಳನ್ನು ಬಂಧಿಸಿದೇ ಬಿಟ್ಟಿರುವುದೇತಕೆ? ಎಂದು ಅಲ್ಲಿದ್ದವರು ಪ್ರಶ್ನಿಸಿದರು.
ಆಗ ಉತ್ತರಿಸಿದ ಕೆ ಎಲ್ ಗಣೇಶ ಅವರು `ಒಂದು ಪ್ರಾಥಮಿಕ ತನಿಖೆ ಮಾಡಬೇಕಾದರೆ 14 ದಿನಗಳ ಕಾಲ ಕಾಲಾವಕಾಶ ಬೇಕಾಗುತ್ತದೆ. ಆದರೆ ನಾವು ಒಂದೇ ದಿನದಲ್ಲಿ ಪ್ರಾಥಮಿಕ ತನಿಖೆ ಮಾಡಿದ್ದೇವೆ. ಸರಕಾರಕ್ಕೆ ಸಂಬAಧಿಸಿದ ವಿಚಾರವಾಗಿರುವುದರಿಂದ ಮಾರನೇ ದಿನವೇ ಎಫ್ಐಆರ್ ಮಾಡಲಾಗಿದ್ದು, ತನಿಖೆಗೆ ಎರಡು ತಂಡ ರಚಿಸಲಾಗಿದೆ’ ಎಂಬ ಮಾಹಿತಿ ನೀಡಿದರು. `ಒಂದು ತಂಡ ಶಿವಮೊಗ್ಗದಲ್ಲಿ ಹಾಗೂ ಇನ್ನೊಂದು ತಂಡ ಕೃಷ್ಣಗಿರಿಯಲ್ಲಿ ಕೆಲಸ ಮಾಡುತ್ತಿದೆ’ ಎಂಬ ವಿಷಯ ವಿವರಿಸಿದರು.
`ಎರಡು ಜೆಸಿಬಿ, ಒಂದು ಕ್ರೇನ್’ನ್ನು ವಶಕ್ಕೆ ಪಡೆಯಲಾಗಿದೆ. ಇನ್ನೊಂದು ಲಾರಿ ಅಲ್ಲಿದ್ದು, ಅದನ್ನು ಹುಡುಕಿ ಕೃಷ್ಣಗಿರಿಗೆ ತೆರಳಲಾಗಿದೆ. ಬೇಡರ ವೇಷ ಮುಗಿದ ನಂತರ ಮತ್ತೆರಡು ತಂಡ ರಚನೆ ಮಾಡಿ ತನಿಖೆ ನಡೆಸಲಿದ್ದು, ಇನ್ನೂ ಮೂರು ದಿನದಲ್ಲಿ ಇನ್ನಷ್ಟು ವಿಷಯ ಹೊರಬರಲಿದೆ’ ಎಂದು ಅಲ್ಲಿದ್ದವರನ್ನು ಸಮಾಧಾನ ಮಾಡಿದರು.
ಕಾಂಗ್ರೆಸ್ ಮುಖಂಡ ಸಂತೋಷ ಶೆಟ್ಟಿ, ಅನಂತ ಆರ್ ನಾಯ್ಕ, ಮಹೇಶ ಶೆಟ್ಟಿ, ಗಣೇಶ ದಾವಣಗೇರಿ, ಖಾಧರ ಆನವಟ್ಟಿ, ಮಧು ಬಿಲ್ಲವ, ಗೀತಾ ಶೆಟ್ಟಿ, ಅಪೂರ್ವ ನಾಯ್ಕ, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಸಂತೋಷ ಕುಮಾರ ಎಮ್, ಎಎಸ್ಐ ಸಂತೋಷ ಕಮಟಗೇರಿ ಇತರರಿದ್ದರು.