ಮುಂಗಾರು ಆಗಮನದಿಂದ ಎಲ್ಲಡೆ ಹಸಿರು ಆವರಿಸಿದ್ದು, ಬೇಸಿಗೆಯಲ್ಲಿ ಕಲ್ಬಂಡೆಗಳಾಗಿದ್ದ ಕೋರೆಗಳಲ್ಲಿಯೂ ಜಲಪಾತಗಳು ಸೃಷ್ಠಿಯಾಗಿವೆ. ಮಳೆಗಾಲದ ಮಾನಿನಿಗಳೆಲ್ಲವೂ ನೀರಹನಿಗಳಿಂದ ವೈಭೋಗಿಸುತ್ತಿವೆ. ಕಾರವಾರ ತಾಲೂಕಿನ ನಾಡಗೇರಿಯಲ್ಲಿ ಮಾನವ ನಿರ್ಮಿತ ಜಲಪಾತ ಪ್ರವಾಸಿಗರನ್ನು ಸೆಳೆಯುತ್ತಿದೆ.
ಕಲ್ಲುಕ್ವಾರಿ ಗಣಿಗಾರಿಕೆ ಜೋರಾಗಿದ್ದ ಸಮಯದಲ್ಲಿ ನಡೆದ ಗಣಿಕಾರಿಕೆ ಪ್ರದೇಶದಲ್ಲಿ ಜಲಪಾತದ ಕೇಳಿ ಬರುತ್ತಿದೆ. ಹಿಂದೆ ನಡೆದ ಗಣಿಗಾರಿಕೆಯಿಂದ ಬೆಚ್ಚಿ ಬಿದ್ದಿದ್ದ ಅರಣ್ಯದಲ್ಲಿ ಝುಳು ಝುಳು ಶಬ್ದ ಇಂಪಾಗಿದೆ. ಗಣಿಗಾರಿಕೆ ಸಮಯದಲ್ಲಿ ಕೇಳಿಸುತ್ತಿದ್ದ ಅರಣ್ಯ ಆಕ್ರಂದನವನ್ನು ಮಳೆನಾಡು ಮರೆಯಿಸಿದೆ. ಸದ್ಯ ಹೊರ ಹೊಮ್ಮುತ್ತಿರುವ ಸಂಗೀತ ಅಲೆಗಳು ಪೃಕೃತಿ ಪ್ರೀಯರನ್ನು ಹನಿಗಳಲ್ಲಿ ನೆನೆಸುತ್ತಿದೆ. ಗಣಿ ಕಂದಕದಲ್ಲಿ ಸುಂದರ ಜಲಪಾತ ಸೃಷ್ಠಿಯಾಗಿದ್ದರಿಂದ ಅದನ್ನು ನೋಡಲು ಜನರು ಬರುತ್ತಿದ್ದಾರೆ. ಬೆಟ್ಟದಿಂದ ಇಳಿದು ಬರುವ ಮುತ್ತುಗಳೆಲ್ಲವೂ ಇಲ್ಲಿ ಒಂದಡೆ ಇಲ್ಲಿ ಧುಮುಕುತ್ತಿವೆ.
ಕಾರವಾರದಿಂದ 7ಕಿ.ಮೀ ದೂರದ ನಾಡಗೇರಿ ರೈಲ್ವೆ ಗೇಟ್ಗಿಂತ ಮುಂಚೆ ಬಲಕ್ಕೆ ಇರುವ ಕಾಡು ದಾರಿಯಲ್ಲಿ ಚಲಿಸಿದರೆ ಹೆಸರಿಲ್ಲದ ಜಲ ಪ್ರಪಾತದ ದರ್ಶನವಾಗುತ್ತದೆ. ಸರಿ ಸುಮಾರು 50 ಅಡಿ ಎತ್ತರದಿಂದ ರಭಸವಾಗಿ ಧುಮುಕುವ ನೀರು ಪ್ರವಾಸಿಗರಿಗೆ ಮಧುರ ಅನುಭೂತಿ ನೀಡುತ್ತದೆ. ಎಲ್ಲಿಯೂ ಆಳವಿಲ್ಲದ ಹಾಗೂ ಜಾರದಿರುವ ಬಂಡೆಗಳಿರುವ ಕಾರಣ ಇಲ್ಲಿ ಅಪಾಯವಿಲ್ಲ. ಹೀಗಾಗಿ ಒಂದು ದಿನದ ಕೌಟುಂಬಿಕ ಪ್ರವಾಸಕ್ಕೆ ಕಲ್ಲುಕ್ವಾರಿಯಿಂದ ನಿರ್ಮಿತವಾದ ಕೃತಕ ಜಲಪಾತ ಹೇಳಿ ಮಾಡಿಸಿದ ತಾಣದಂತಿದೆ. ಬಿಸಿಲು ಮಳೆ ಒಟ್ಟಿಗೆ ಸೇರಿದಾಗ ಜಲಪಾತದ ಬುಡದಲ್ಲಿ ಉದ್ಬವಿಸುವ ಕಾಮನಬಿಲ್ಲು ಕಾಣಿಸುತ್ತದೆ.