ಯಲ್ಲಾಪುರ: ಕಳೆದ ಅನೇಕ ವರ್ಷಗಳಿಂದ ಕಾಡು ಪ್ರಾಣಿಗಳನ್ನು ಹತ್ಯೆ ಮಾಡಿ ಅದರ ಮಾಂಸ ಮಾರುತ್ತಿದ್ದ ರಮೇಶ ನಾಗೇಶ ಗಾಂವ್ಕರ್ (29) ಎಂಬಾತನನ್ನು ಅರಣ್ಯ ಸಿಬ್ಬಂದಿ ಬಂಧಿಸಿದ್ದಾರೆ.
2017ರಲ್ಲಿ ಸಹ ಈತ ಎರಡು ಬಾರಿ ಕಾಡು ಪ್ರಾಣಿ ಹತ್ಯೆ ಮಾಡಿದ್ದ. ಅರಣ್ಯ ಸಿಬ್ಬಂದಿ ಹಿಡಿದಾಗ ಕಾಡಿನಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದ. ಇದೀಗ ಗುರುವಾರ ಹುಲಗೋಡು ಅರಣ್ಯದಲ್ಲಿ ಜಿಂಕೆಯನ್ನು ಕೊಂದು ಸಿಕ್ಕಿ ಬಿದ್ದಿದ್ದಾನೆ. ಜಿಂಕೆ ಕೊಂದ ನಂತರ ಅದರ ತಲೆ ಹಾಗೂ ಕಾಲುಗಳನ್ನು ಕಾಡಿನಲ್ಲಿ ಬಿಟ್ಟು ಬಂದಿದ್ದು, ಅದನ್ನು ನೋಡಿ ಬೆನ್ನತ್ತಿದ ಅರಣ್ಯ ಸಿಬ್ಬಂದಿಗೆ ರಮೇಶನ ಬಗ್ಗೆ ಅನುಮಾನಗಳಿದ್ದವು. ಅದಾಗಿಯೂ ಮಾಹಿತಿ ಖಚಿತಪಡಿಸಿಕೊಂಡು ಆತನ ಮನೆ ಮೇಲೆ ದಾಳಿ ನಡೆಸಿದಾಗ ಮಾಂಸದ ಜೊತೆ ಆತ ಕಾಣಿಸಿಕೊಂಡಿದ್ದಾನೆ. ತಕ್ಷಣ ಅರಣ್ಯಾಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದರು.
ಇದಾದ ನಂತರ ಆತ ಕಾಡಿನಲ್ಲಿ ಬಿಟ್ಟು ಬಂದಿದ್ದ ಜಿಂಕೆ ಚರ್ಮ, ಎರಡು ಕಾಲು ಹಾಗೂ ತಲೆಯನ್ನು ಅರಣ್ಯ ಕಚೇರಿಗೆ ತಂದಿದ್ದಾರೆ.
ಇನ್ನೆರಡು ಕಾಲು ಎಲ್ಲಿ?
`ಕಾಡಿನಲ್ಲಿ ನಾಯಿ ಜಿಂಕೆಯನ್ನು ಹತ್ಯೆ ಮಾಡಿತ್ತು. ನಾನು ನಾಯಿಯನ್ನು ಓಡಿಸಿ ಮಾಂಸ ತಂದಿದ್ದೇನೆ’ ಎಂದು ರಮೇಶ ಸಮಜಾಯಿಶಿ ನೀಡಲು ಮುಂದಾಗಿದ್ದು ಅರಣ್ಯ ಸಿಬ್ಬಂದಿ ಇದನ್ನು ಒಪ್ಪಲಿಲ್ಲ. `ನಾನು ನೋಡಿದಾಗ ಜಿಂಕೆಗೆ ಎರಡೇ ಕಾಲಿತ್ತು’ ಎಂದು ಆತ ಹೇಳಿಕೆ ಕೊಟ್ಟಿದ್ದಾನೆ. `ತನ್ನೊಂದಿಗೆ ಇನ್ನಷ್ಟು ಜನ ಇದ್ದಾರೆ’ ಎಂದು ಸಹ ಆತ ಹೇಳಿಕೊಂಡಿದ್ದು, ಸಹಚರರಿಗೆ ನಡುಕ ಹುಟ್ಟಿದೆ.