ಕುಮಟಾ: ಗುಟಕಾ, ಬೀಡಿ ಮಾರುವ ಗೂಡಂಗಡಿ ಮುಂದೆ ನಿಂತು `ಇಲ್ಲಿ ಕೆಲಸ ಕೊಡಿಸುವವರು ಯಾರಾದರೂ ಇದ್ದಾರ?’ ಎಂದು ಪ್ರಶ್ನಿಸಿದರೂ ಸಾಕು. `ಗಣಪತಿ ಜಾಬ್ ಲಿಂಕ್ಸ್’ ಎಂಬ ಕಚೇರಿಯ ವಿಳಾಸ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಈ `ದುಷ್ಟಕೂಟ’ ಪ್ರಸಿದ್ಧಿ. ಸರ್ಕಾರಿ ಕೆಲಸ ಕೊಡಿಸುವುದು ಎಂದರೆ ಈ ತಂಡದವರಿಗೆ ಬಾಡಿಗೆ ಮನೆ ಹುಡುಕಿಕೊಡುವುದಕ್ಕಿಂತ ಸಲೀಸು!
ಸರ್ಕಾರಿ ನೌಕರಿ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂ ವಂಚಿಸಿರುವ ಪ್ರಕರಣದ ಬೆನ್ನತ್ತಿರುವ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕುಮಟಾ ತಾಲೂಕಿನ ಅಘನಾಶಿನಿ ನಿವಾಸಿ ಮಾಲಿನಿ ಗಣಪತಿ ಅಂಬಿಗ ಹಾಗೂ ಪಟ್ಟಣದ ಪೈರಗದ್ದೆಯ ನಿವಾಸಿ ಶ್ರೀಧರ ಗಣೇಶ ಕುಮಟಾಕರ್ ಎಂಬ ಇಬ್ಬರು ಸೇರಿ `ಗಣಪತಿ ಜಾಬ್ ಲಿಂಕ್ಸ್’ ಎಂಬ ಕಚೇರಿ ತೆರೆದು ವಂಚಿಸುವುದನ್ನು ಕಾಯಕ ಮಾಡಿಕೊಂಡಿದ್ದರು. ಕೆಲಸ ಇಲ್ಲದ ವಿದ್ಯಾವಂತ ನಿರುದ್ಯೋಗಿಗಳನ್ನು ಗುರಿಯಾಗಿರಿಸಿಕೊಂಡು ಅವರಿಂದ ಹಣ ವಸೂಲಿ ಮಾಡುತ್ತಿದ್ದರು.
ಮೊದಲು ಮಾಲಿನಿ ಅಂಬಿಗ ಮತ್ತು ಶ್ರೀಧರ ಕುಮಟಾಕರ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸರು ಇವರಿಬ್ಬರನ್ನು ತನಿಖೆಗೆ ಒಳಪಡಿಸಿದ್ದರು. ತನಿಖೆಯಲ್ಲಿ ನೌಕರಿ ಕೊಡಿಸುವ ಸಂಬAಧ ಹಲವರಿಂದ ಲಕ್ಷಾಂತರ ರೂ ಹಣ ಪಡೆದಿರುವುದು ಹಾಗೂ ಈ ಪ್ರಕರಣದಲ್ಲಿ ಇನ್ನು ಅನೇಕರು ಭಾಗಿಯಾಗಿರುವುದು ಗೊತ್ತಾಗಿದೆ. ತಾವು ನೀಡಿದ ಮಾಹಿತಿಗೆ ಅಂಗವಾಗಿ ಪೊಲೀಸರು ಕ್ರಮ ಜರುಗಿಸದ ಕಾರಣ ಮಾಲತಿ ಅಂಬಿಗ ಸಹ ಕುಮಟಾ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರನ್ನು ಪುರಸ್ಕರಿಸಿದ ನ್ಯಾಯಾಲಯ ನೌಕರಿ ಕೊಡಿಸುವುದಾಗಿ ಮಾಲಿನಿ ಅಂಬಿಗ್ ಅವರಿಂದಲೂ ಲಕ್ಷಾಂತರ ರೂ ಹಣ ಪಡೆದ ಮಿರ್ಜಾನ್ ನಿವಾಸಿಗಳಾದ ಶ್ರೀಧರ ನಾಯ್ಕ, ಗೋಪಾಲಕೃಷ್ಣ ನಾಯ್ಕ, ಶಶಿಕಲಾ ಗೋಪಾಲಕೃಷ್ಣ ನಾಯ್ಕ, ಬಾಡದ ಸತೀಶ್ ಪಟಗಾರ ಮತ್ತು ಬೆಂಗಳೂರಿನ ಧರ್ಮೇಂದ್ರ ಕುಲ್ಕರ್ಣಿ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರಿಗೆ ಸೂಚಿಸಿತು.
ಈ ಪ್ರಕರಣದಲ್ಲಿ ಮಾಲಿನಿ ಅಂಬಿಗ್ ಅವರಿಂದ 3.20 ಲಕ್ಷ ರೂಗಳನ್ನು ಆರೋಪಿತರು ಪಡೆದುಕೊಂಡಿದ್ದು, 11 ನರ್ಸಿಂಗ್ ವಿದ್ಯಾರ್ಥಿಗಳಿಂದ ತಲಾ 2 ಲಕ್ಷಕ್ಕೂ ಅಧಿಕ ಹಣವನ್ನು ಆರೋಪಿತರಾದ ಶಶಿಕಲಾ ನಾಯ್ಕ ಅವರು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿರುವುದು ಗೊತ್ತಾಗಿದೆ. ಶ್ರೀಧರ ನಾಯ್ಕ ಮತ್ತು ಸತೀಶ್ ಪಟಗಾರ ನಗದು ಮತ್ತು ಫೋನ್ ಪೇ ಮುಖಾಂತರ ಲಕ್ಷಾಂತರ ಹಣ ಪಡೆದು ಅನೇಕರನ್ನು ವಂಚಿಸಿರುವ ಬಗ್ಗೆ ಎಫ್ಐಆರ್’ನಲ್ಲಿ ನಮೂದಿಸಲಾಗಿದೆ.
ಆರೋಪಿತರು ಪ್ರಭಾವಿಗಳ ಜೊತೆ ಅಲ್ಲಲ್ಲಿ ಫೋಟೋ ತೆಗೆಸಿಕೊಂಡು, ಬಂದವರಿಗೆಲ್ಲ ಅದನ್ನು ತೋರಿಸುತ್ತಿದ್ದರು. ರಾಜಕಾರಣಿ, ಸಿನಿಮಾ ನಟ ಇನ್ನಿತರ ಕ್ಷೇತ್ರದಲ್ಲಿರುವವರ ಜೊತೆ ಉತ್ತಮ ಸಂಬAಧ ಹೊಂದಿದ್ದರೆAದು ಭಾವಿಸಿದ್ದ ಜನ ಈ ವಂಚಕರ ವಿರುದ್ಧ ದೂರು ನೀಡಲು ಅಂಜುತ್ತಿದ್ದರು. ಆದರೆ, ಮೋಸಕ್ಕೆ ಒಳಗಾದ ಯುವತಿ ಧೈರ್ಯ ಮಾಡಿ ತಿಂಗಳ ಹಿಂದೆ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣದ ಹಿಂದೆ ಬಿದ್ದಾಗ ರೋಚಕ ಸಂಗತಿಗಳು ಹೊರಬಂದಿವೆ.
Discussion about this post