ಜೋಯಿಡಾ: ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಣಿಕಂಬಾದ ದೇವರಾಜ ಹೆಗಡೆ ಅವರ ತೋಟದಲ್ಲಿ 50ಕ್ಕೂ ಅಧಿಕ ಅಡಿಕೆ ಮರ ಗಾಳಿ-ಮಳೆಗೆ ಮುರಿದಿದ್ದು, ಉಳಿದ ಮರಗಳಿಗೆ ಕೊಳೆರೋಗ ಆವರಿಸಿದೆ. ಇದರಿಂದ ಆ ಭಾಗದ ರೈತರು ಕಂಗಾಲಾಗಿದ್ದಾರೆ.
ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕೊಳೆ ರೋಗಕ್ಕೆ ಮದ್ದು ಸಿಂಪಡಿಸಲು ಸಾಧ್ಯವಾಗುತ್ತಿಲ್ಲ. ಮಳೆ ಕಾರಣದಿಂದ ಕೊಳೆ ರೋಗ ವ್ಯಾಪಕವಾಗಿ ಹರಡಿ, ಅಡಿಕೆ ಮಿಳ್ಳೆಗಳು ಉದುರುತ್ತಿವೆ. ಕೊಳೆ ರೋಗದ ಬಗ್ಗೆ ತೋಟಗಾರಿಕಾ ಇಲಾಖೆ ಸಮೀಕ್ಷೆ ನಡೆಸಿದ್ದು, ಇದಕ್ಕೆ ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. `ಅಡಕೆ ಕೊಳೆ ರೋಗದಿಂದ ಸಂಪೂರ್ಣ ತೋಟ ನಾಶವಾಗಿದೆ. ಅಡಿಕೆ ಮರ ಮುರಿದಿದ್ದರಿಂದಲೂ ಲಕ್ಷಾಂತರ ರೂ ಹಾನಿಯಾಗಿದೆ’ ಎಂದು ದೇವರಾಜ ಹೆಗಡೆ ಅಳಲು ತೋಡಿಕೊಂಡರು.
`ಈ ಬಗ್ಗೆ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಆದ ಹಾನಿ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ’ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿ ಸಂತೋಷ ಎಕ್ಕಳ್ಳಿಕರ ತಿಳಿಸಿದರು.
Discussion about this post