ಅಂಕೋಲಾ: ಅತ್ಯುತ್ತಮ ಕಬ್ಬಡ್ಡಿ ಆಟಗಾರ ಸುದರ್ಶನ ಆಗೇರ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದರಿಂದ ಅವರು ಭಾನುವಾರ ಸಾವನಪ್ಪಿದರು.
ಬಾಸಗೋಡ ಕೋಗ್ರೆಯ ಸುದರ್ಶನ ವಿನಾಯಕ ಆಗೇರ (23) ಅವರಿಗೆ ಬಾಲ್ಯದಿಂದಲೂ ಕಬ್ಬಡ್ಡಿ ಮೇಲೆ ವಿಪರೀತ ಮೋಹ. ಸುತ್ತಲಿನ ಊರಿನಲ್ಲಿ ಎಲ್ಲಿಯೇ ಕಬ್ಬಡ್ಡಿ ಆಟ ಸಂಘಟಿಸಿದರೂ ಅಲ್ಲಿ ಸುದರ್ಶನರ ಹಾಜರಿ ಕಡ್ಡಾಯ. ಶನಿವಾರ ಆಗೇರ ಸಮಾಜದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಸಹ ಸುದರ್ಶನ ಆಗೇರ್ ಉತ್ಸಾಹದಿಂದ ಭಾಗವಹಿಸಿದ್ದರು. ತಮ್ಮ ಗೆಳೆಯರೊಂದಿಗೆ ಕೋಗ್ರೆ ತಂಡವನ್ನು ಪ್ರತಿನಿಧಿಸಿ ಅತ್ಯುತ್ತಮ ಆಟ ಆಡಿದ್ದರು.
ಮೊದಲ ಮೂರು ಸುತ್ತಿನಲ್ಲಿಯೂ ವಿಜಯ ಸಾಧಿಸಿದ ಸುದರ್ಶನ ಅವರ ತಂಡ ಅಂತಿಮ ಹಣಾಹಣಿಯ ಸಿದ್ಧತೆ ನಡೆಸಿತ್ತು. ವಿರಾಮದ ಅವಧಿಯಲ್ಲಿ ಆಟದ ಬಗ್ಗೆ ಚರ್ಚಿಸುತ್ತಿರುವಾಗಲೇ ಸುದರ್ಶನ ಅವರು ಉಸಿರಾಟದ ತೊಂದರೆ ಅನುಭವಿಸಿದರು. ಕೂಡಲೇ ಸುದರ್ಶನ ಅವರನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟರೊಳಗೆ ಅವರು ಸಾವನಪ್ಪಿದ್ದರು.