ಬೆಳಗ್ಗೆ 11 ಗಂಟೆ ಅವಧಿಗೆ ಕೈಗಾದಿಂದ ವಿಕಿರಣ ಸೋರಿಕೆಯ ಸಂದೇಶ ಬಂದಿತು. ಈ ಬಗ್ಗೆ ಮೊದಲೇ ಅರಿವು ಹೊಂದಿದ್ದ ಉತ್ತರ ಕನ್ನಡ ಜಿಲ್ಲಾಡಳಿತ ಕಿಂಚಿತ್ತು ಆತಂಕ-ಗಡಿಬಿಡಿಗೆ ಒಳಗಾಗದೇ ಯಶಸ್ವಿ ಕಾರ್ಯಾಚರಣೆ ನಡೆಸಿತು.
ಬುಧವಾರ ಅಣಕು ಕಾರ್ಯಾಚರಣೆ ನಡೆಸುವ ಬಗ್ಗೆ ಮೊದಲೇ ನಿರ್ಧರಿಸಲಾಗಿತ್ತು. ಹೀಗಾಗಿ ಎನ್.ಪಿ.ಸಿ.ಎಲ್ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಅಣು ವಿಕಿರಣ ಸೋರಿಕೆಯಾದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿತ್ತು. ಉತ್ತರ ಕನ್ನಡ ಜಿಲ್ಲಾಡಳಿತ, ಕೈಗಾ ಅಣು ವಿದ್ಯುತ್ ಸ್ಥಾವರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಅಣುಶಕ್ತಿ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಅಣು ವಿಕಿರಣ ಸೋರಿಕೆಯಾದರೂ ಅಪಾಯ ಆಗದಂತೆ ಮಾಡುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.
`ಈ ಅಣಕು ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿದೆ. ನೈಜ ಸನ್ನಿವೇಶದಲ್ಲಿ ಇಂಥ ಅವಘಡ ನಡೆದರೂ ಅಧಿಕಾರಿಗಳು ಇದೇ ರೀತಿ ಜವಾಬ್ದಾರಿಯಿಂದ ವರ್ತಿಸಬೇಕು’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಹೇಳಿದರು. ವಿಕಿರಣ ಸೋರಿಕೆ ಕುರಿತು ಕೈಗಾ ಕೇಂದ್ರದ ನಿರ್ದೇಶಕರಿಂದ ಮಾಹಿತಿ ಸ್ವೀಕೃತಿಯಾದ ಕೂಡಲೇ ಜಿಲ್ಲಾಧಿಕಾರಿಗಳು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆ ನಡೆಸಿದರು. ಎಲ್ಲಾ ಅಧಿಕಾರಿಗಳಿಗೆ ತುರ್ತು ಅಗತ್ಯ ಕಾರ್ಯಚರಣೆ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕೈಗಾ ಸಂಪರ್ಕಿಸುವ ರಸ್ತೆಗಳಲ್ಲಿ ಪೊಲೀಸರು ಬಾರಿಕೇಡ್ ಗಳನ್ನು ಅಳವಡಿಸಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದರು. ಅಣು ವಿಕಿರಣವು ವಾತಾವರಣದಲ್ಲಿ ಗಾಳಿಯ ಮೂಲಕ ಹರಡುತ್ತಿದ್ದ ಕೈಗಾ, ಬಾಳೆಮನೆ, ಹರಟುಗ, ದಾಸನಹಳ್ಳಿ, ಕೊಚೆಗಾರ್, ವಿರ್ಜೆ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಮುನ್ನಚ್ಚರಿಕೆಯ ಸಂದೇಶ ರವಾನಿಸಲಾಯಿತು. `ಅಣು ವಿದ್ಯುತ್ ಸ್ಥಾವರದಲ್ಲಿ ಸೋರಿಕೆಯಾದ ಅಣು ವಿಕಿರಣದ ಪ್ರಮಾಣವು ಅತ್ಯಂತ ಕಡಿಮೆಯಿದ್ದು, ಯಾವುದೇ ಅಪಾಯವಿಲ್ಲ’ ಎಂದು ಧೈರ್ಯ ಹೇಳಲಾಯಿತು. ಸಾರ್ವಜನಿಕರು ಸೋಷಿಯಲ್ ಮೀಡಿಯಾಗಳಲ್ಲಿ ಬರುತ್ತಿರುವ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಅಧಿಕೃತವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ ಪ್ರಕಟಣೆ ಹಾಗೂ ಮುನ್ಸೂಚನೆ ಪಾಲಿಸಬೇಕು’ ಎಂದು ಕರೆ ನೀಡಲಾಯಿತು.
ಅಣು ವಿಕಿರಣವು ಹರಡುತ್ತಿದ್ದ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯವರು ವಿಕಿರಣದ ಅಪಾಯವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದೇಹದಲ್ಲಿ ವಿಕಿರಣದ ಪ್ರಭಾವ ಹರಡುವುದನ್ನು ತಡೆಯಲು ಅಗತ್ಯವಿರುವ ವಿಕಿರಣ ನಿಯಂತ್ರಕ ಮಾತ್ರೆಗಳನ್ನು ವಿತರಿಸಿದರು. ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಸ್ಥಳೀಯವಾಗಿ ಸಿದ್ದಪಡಿಸಿದ ಆಹಾರ ಮತ್ತು ನೀರು ಸೇವನೆ ಮಾಡದಂತೆ ಸೂಚನೆ ನೀಡಿದರು. ಅವರಿಗೆ ಸಿದ್ದಪಡಿಸಿದ ಆಹಾರದ ಪ್ಯಾಕೇಟ್ಗಳನ್ನು ಮತ್ತು ಕುಡಿಯುವ ನೀರಿನ ಬಾಟೆಲ್ ಸರಬರಾಜು ಮಾಡಲಾಯಿತು. ಮಧ್ಯಾಹ್ನ 4 ಗಂಟೆಯ ವೇಳೆಗೆ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸೋರಿಕೆಯಾಗಿದ್ದ ಅಣು ವಿಕಿರಣದ ಹರಡುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಣಗೊಳಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವಿಕಿರಣ ಹರಡಿದ್ದ ವಿರ್ಜೆ ಮತ್ತು ಬಾಳೆಮನೆ ಗ್ರಾಮದ ನಿವಾಸಿಗಳನ್ನು ಕ್ರಮವಾಗಿ ಕಾರವಾರ ಪಾಲಿಟೆಕ್ನಿಕ್ ಕಾಲೇಜು ಮತ್ತು ಚಿತ್ತಾಕುಲ ಪ್ರಾಥಮಿಕ ಶಾಲೆಗಳಿಗೆ ಸ್ಥಳಾಂತರಿಸಲಾಯಿತು.
ವಿಕಿರಣ ಪ್ರಸಾರಗೊಂಡಿದ್ದ ಇತರೇ ಗ್ರಾಮಗಳಾದ ಕೈಗಾ, ಹರಟುಗ, ದಾಸನಹಳ್ಳಿ, ಕೊಚೆಗಾರ್ ಗ್ರಾಮಗಳಲ್ಲಿನ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಮೂಲಕ ತಪಾಸಣೆ ನಡೆಸುವಂತೆ ಸೂಚನೆ ನೀಡಿ, ಅನಾವಶ್ಯಕವಾಗಿ ಹೊರಗಡೆ ಓಡಾಟ ನಡೆಸದಂತೆ ಮತ್ತು ಸ್ಥಳೀಯವಾಗಿ ಸಿದ್ದಪಡಿಸಿದ ಆಹಾರ ಮತ್ತು ನೀರು ಸೇವನೆ ಮಾಡದಂತೆ ಸೂಚನೆ ನೀಡಲಾಯಿತು. ಸಂಜೆ 6 ಗಂಟೆಯ ವೇಳೆಗೆ ಕೈಗಾದ ನಿರ್ದೇಶಕರಿಂದ ಕೈಗಾ ಪರಿಸರದಲ್ಲಿ ಅಣು ವಿಕಿರಣ ಪ್ರಸರಣವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿರುವ ಬಗ್ಗೆ ಮಾಹಿತಿ ನೀಡಿದರು. ಹೀಗಾಗಿ ಅಣಕು ಕಾರ್ಯಚರಣೆ ಅಲ್ಲಿಗೆ ಮುಕ್ತಾಯವಾಯಿತು.