ಉರಿಯುತ್ತಿರುವ ಬೆಂಕಿಯ ಒಳಗಡೆ ಸೈನಿಕರ ಹಾರಾಟ.. ಸಿಡಿಮದ್ದುಗಳ ಸದ್ದಿನ ನಡುವೆ ನಾಯಿಗಳ ಚುರುಕು ಓಡಾಟ ಸೇರಿ ಹಲವು ಚಿತ್ರ-ವಿಚಿತ್ರ ಸನ್ನಿವೇಶಗಳು ಸೋಮವಾರ ಕಾರವಾರದ ಕುರ್ನಿಪೇಟೆಯಲ್ಲಿ ಕಾಣಿಸಿದವು.
ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲದ 56ನೇ ಸ್ಥಾಪನಾ ದಿವಸ ಕಾರ್ಯಕ್ರಮದ ಅಂಗವಾಗಿ ಕೈಗಾ ಭದ್ರತಾ ಪಡೆಯವರು ಶಕ್ತಿ ಪ್ರದರ್ಶನ ಆಯೋಜಿಸಿ, ಜನರಿಗೆ ಧೈರ್ಯ ತುಂಬಿದರು. ಆ ಮೂಲಕ ಸಾರ್ವಜನಿಕ ಸ್ವತ್ತುಗಳ ರಕ್ಷಣೆ, ಸಾಹಸ, ಸೈನಿಕರ ಕಾರ್ಯತತ್ಪರತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದರು.
ಈ ಕಾರ್ಯಕ್ರಮದಲ್ಲಿ ನಡೆದ ಶ್ವಾನ ದಳದ ಪ್ರದರ್ಶನ, ವಿಶೇಷ ಕಾರ್ಯಪಡೆಯಿಂದ ಫೈರ್ ರಿಂಗ್ ಜಂಪ್ ಮತ್ತು ರಿಪ್ಲೆಕ್ಸ್ ಶೂಟಿಂಗ್ ಗಮನಸೆಳೆಯಿತು. ಅಲ್ಲಿ ಹಾಜರಿದ್ದವರು ಎನ್ಪಿಸಿಐಎಲ್ ಕೈಗಾದ ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಬಲದ ಘಟಕದ ಉದ್ಯೋಗಿಗಳ ಕಾರ್ಯ ದಕ್ಷತೆಯ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಸೇವಾ ಮನೋಭಾವದಿಂದ ದೇಶಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಈ ವೇಳೆ ಸ್ಮರಿಸಲಾಯಿತು.
ಕೈಗಾದ ಸ್ಥಳ ನಿರ್ದೇಶಕ ಬಿ ವಿನೋದಕುಮಾರ, ಕೈಗಾ ಉತ್ಪಾದನಾ ಕೇಂದ್ರ 1 ಮತ್ತು 2 ರ ಕೇಂದ್ರ ನಿರ್ದೇಶಕ ಕೆ ಶ್ರೀರಾಮ, ಕೈಗಾ ಉತ್ಪಾದನಾ ಕೇಂದ್ರ 3 ಮತ್ತು 4ರ ಕೇಂದ್ರ ನಿರ್ದೇಶಕ ಸುನೀಲ ಕುಮಾರ ಓಝಾ, ಕೈಗಾ 5 ಮತ್ತು 6 ರ ಯೋಜನಾ ನಿರ್ದೇಶಕ ಜೆ ಎಲ್ ಸಿಂಗ್ ಇತರರು ಸೇವೆಯಲ್ಲಿ ಮಡಿದ ವೀರಯೋಧರಿಗೆ ಶೃದ್ಧಾಂಜಲಿ ಸಲ್ಲಿಸಿದರು.