ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಇದೇ ಜಿಲ್ಲೆಯಲ್ಲಿ ಸಮುದ್ರ ಸೇರುವ ಕಾಳಿ ನದಿಗೆ ಅಡ್ಡಲಾಗಿ ಒಟ್ಟು ಐದು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಈ ಅಣೆಕಟ್ಟುಗಳ ಮೂಲಕ ನಿರಂತರವಾಗಿ ವಿದ್ಯುತ್ ಉತ್ಪಾದನೆ ನಡೆಯುತ್ತದೆ. ಆದರೆ, ವಿದ್ಯುತ್ ಮಾರಾಟದಿಂದ ಬರುವ ಆದಾಯದಲ್ಲಿ ಈವರೆಗೆ ಒಂದೇ ಒಂದು ರೂಪಾಯಿಯನ್ನು ಸಹ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಬಳಸಿಲ್ಲ.
ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಯಿಂದ ಈ ವಿಷಯ ಹೊರಬಿದ್ದಿದೆ. ಎಲ್ಲಾ ಉದ್ದಿಮೆಗಳು ಸಾಮಾಜಿಕ ಹೊಣೆಗಾರಿಕೆ ಅಡಿ ತಮ್ಮ ಲಾಭದಲ್ಲಿ ಒಂದಷ್ಟು ಹಣವನ್ನು ಸ್ಥಳೀಯ ಪ್ರದೇಶಗಳ ಅಭಿವೃದ್ಧಿಗೆ ನೀಡಬೇಕು. ಸರ್ಕಾರಿ ಸ್ವಾಧೀನದ ಕಂಪನಿಗಳು ಸಹ ಇದರಿಂದ ಹೊರತಾಗಿಲ್ಲ. ಸರ್ಕಾರದ ಉದ್ದಿಮೆಗಳ ಒಂದು ಭಾಗವಾದ ಕರ್ನಾಟಕ ಪವರ್ ಕಾರ್ಫೋರೇಶನ್ ಲಿಮಿಟೆಡ್’ನಲ್ಲಿ ಮಾತ್ರ ಇದಕ್ಕೆ ಉತ್ತರವಿಲ್ಲ. ಕಾಳಿ ನದಿಗೆ ಅಡ್ಡಲಾಗಿ ಕೊಡಸಳ್ಳಿ, ಕದ್ರಾ, ಸೂಪಾ, ಬೊಮ್ಮನಳ್ಳಿ ಹಾಗೂ ತಟ್ಟಿಹಳ್ಳದಲ್ಲಿ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಮಳೆಗಾಲದ ವೇಳೆ ಅಣೆಕಟ್ಟು ಪೂರ್ತಿಯಾಗಿ ನೀರು ತುಂಬಿಸಿ, ನಂತರ ವರ್ಷವಿಡೀ ಇಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಆ ವಿದ್ಯುತ್ ಮಾರಾಟದಿಂದ ನಿಗಮಕ್ಕೆ ಕೋಟಿ ಲೆಕ್ಕಾಚಾರದಲ್ಲಿ ಲಾಭ ಬರುತ್ತಿದೆ. ಆದರೆ, ಅಣೆಕಟ್ಟು ಬಂದದ್ದರಿoದ ಸ್ಥಳೀಯರಿಗೆ ಆದ ಉಪಯೋಗಗಳಿಗಿಂತ ಉಪದ್ರವಗಳೇ ಹೆಚ್ಚು.
ಪ್ರತಿ ವರ್ಷ ಮಳೆಗಾಲದಲ್ಲಿ ಅಣೆಕಟ್ಟು ಭರ್ತಿ ಮಾಡಲಾಗುತ್ತದೆ. ಮಳೆ ಇನ್ನಷ್ಟು ಜಾಸ್ತಿ ಆದಾಗ ಏಕಾಏಕಿ ಅಣೆಕಟ್ಟಿನ ದ್ವಾರಗಳನ್ನು ತೆರೆಯುತ್ತಾರೆ. ಇದರಿಂದ ಅಣೆಕಟ್ಟು ತಳಭಾಗದ ಅನೇಕ ಊರುಗಳು ಜಲಾವೃತವಾಗುವುದು ಇಲ್ಲಿನ ಅತಿ ದೊಡ್ಡ ಸಮಸ್ಯೆ. ನೆರೆ ಬಂದಾಗ ಮಾನವೀಯ ನೆಲೆಯಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಕೆಲಸವನ್ನು ಸಹ ನಿಗಮ ಮಾಡಿಲ್ಲ. `ತನಗೂ ಇದಕ್ಕೂ ಸಂಬoಧವೇ ಇಲ್ಲ’ ಎಂಬAತೆ ಇರುವ ವಿದ್ಯುತ್ ನಿಗಮ ದಾಖಲೆಗಳ ಪ್ರಕಾರ ವಿದ್ಯುತ್ ಉತ್ಪಾದಿಸಿ ಗುರಿ ಸಾಧಿಸುತ್ತಿದೆ.
ಅಣೆಕಟ್ಟಿನ ಹಿನ್ನಿರಿನ ಪ್ರದೇಶದಲ್ಲಿ ಸಹ ಹಲವು ಊರುಗಳಿವೆ. ಆ ಊರುಗಳ ಅಭಿವೃದ್ಧಿಗೆ ಮೊದಲಿನಿಂದ ತೊಡಕುಗಳಿವೆ. ಅನೇಕ ಹಳ್ಳಿಗರನ್ನು ಅಣೆಕಟ್ಟು ಕಟ್ಟುವ ವೇಳೆಯೇ ಒಕ್ಕಲೆಬ್ಬಿಸಲಾಗಿದೆ. ಆದರೆ, ಒಂದೆರಡು ಕಡೆ ಹೊರತುಪಡಿಸಿದರೆ ಉಳಿದ ಕಡೆ ಸರಿಯಾದ ಪುನರ್ವಸತಿ ಕಲ್ಪಿಸಿಲ್ಲ. ಕೊಟ್ಟಿದ್ದು ಸಹ ಮೂರುಕಾಸಿನ ಪರಿಹಾರ.
ಇಷ್ಟೇಲ್ಲ ಬಾಧಕಗಳಿದ್ದರೂ ಅದನ್ನು ಜಿಲ್ಲೆಯ ಜನ ಸಹಿಸಿಕೊಂಡಿದ್ದಾರೆ. ಯಾರೂ ಪ್ರಶ್ನಿಸುವವರು ಇಲ್ಲ ಎಂಬ ಕಾರಣದಿಂದ ಸಾಮಾಜಿಕ ಜವಾಬ್ದಾರಿ ಅಡಿ ಜಿಲ್ಲೆಯ ಅಭಿವೃದ್ಧಿಗೆ ಬರಬೇಕಿದ್ದ ಹಣ ಸಹ ಬಂದಿಲ್ಲ. `ಸಿಎಸ್ಆರ್ ನಿಧಿ ಅಡಿ ಉತ್ತರ ಕನ್ನಡ ಜಿಲ್ಲೆಗೆ ವ್ಯಯಿಸಿದ ಹಣ’ದ ಬಗ್ಗೆ ಕೇಳಿದಾಗ `ಜಿಲ್ಲಾವಾರು ಹಣ ಹಂಚುವ ಪದ್ಧತಿ ಇಲ್ಲ’ ಎಂದು ಉತ್ತರ ನೀಡಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದವರು ಜಾರಿಕೊಂಡಿದ್ದಾರೆ.
– ಅಚ್ಯುತಕುಮಾರ ಯಲ್ಲಾಪುರ
Discussion about this post