ಕಾರವಾರದ ಕಾಳಿ ಸಂಗಮ ಪ್ರದೇಶದಲ್ಲಿ ಕುಸಿತ ಕಂಡಿದ್ದ ಪುರಾತನ ಸೇತುವೆಯ ಪಿಲ್ಲರಿನ ಒಂದು ಭಾಗ ಮಂಗಳವಾರ ಹೊಸ ಸೇತುವೆಯ ಮೇಲ್ಬಾಗಕ್ಕೆ ಅಪ್ಪಳಿಸಿದೆ. ಇದರಿಂದ ಸೇತುವೆ ಮೇಲೆ ಸಂಚರಿಸುವವರು ಆತಂಕವ್ಯಕ್ತಪಡಿಸಿದ್ದು, ನಂತರ ಸುರಕ್ಷಿತವಾಗಿ ತಲುಪಬೇಕಾದ ಸ್ಥಳಕ್ಕೆ ತೆರಳಿದರು.
ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್ಬಿ ಕಂಪನಿ ಹಳೆ ಸೇತುವೆ ತೆರವು ಕೆಲಸ ಮಾಡುತ್ತಿದೆ. ಸಾಕಷ್ಟು ಮುನ್ನಚ್ಚರಿಕೆವಹಿಸಿ ಕೆಲಸ ಮಾಡುವಂತೆ ಜಿಲ್ಲಾಡಳಿತವೂ ಕಂಪನಿಗೆ ಸೂಚಿಸಿದೆ. ಕಾಳಿ ಸೇತುವೆ ಕುಸಿದು ಬಿದ್ದಾಗ ಹಾಗೂ ಅದರ ಒಂದು ಪಿಲ್ಲರ್ ಅಪಾಯಕ್ಕೆ ಸಿಲುಕಿದಾಗಲೂ ಜಿಲ್ಲಾಡಳಿತ ಈ ಬಗ್ಗೆ ಎಚ್ಚರಿಕೆ ನೀಡಿದೆ. ಯಾವುದೇ ಕಾರಣಕ್ಕೂ ಹೊಸ ಸೇತುವೆಗೆ ಅಪಾಯ ಆಗದಂತೆ ಮುನ್ನಚ್ಚರಿಕೆವಹಿಸುವಂತೆ ತಿಳಿಸಲಾಗಿದೆ.
ಅದಾಗಿಯೂ, ಮಂಗಳವಾರ ಹಳೆಯ ಸೇತುವೆಯ ತುಂಡೊoದು ಹೊಸ ಸೇತುವೆಯ ಮೇಲ್ಬಾಗಕ್ಕೆ ಅಪ್ಪಳಿಸಿದೆ. ಸದ್ಯ ಭಾರೀ ಪ್ರಮಾಣದ ಯಂತ್ರಗಳ ಮೂಲಕ ಹಳೆ ಸೇತುವೆಯನ್ನು ತುಂಡರಿಸುವ ಕೆಲಸ ನಡೆಯುತ್ತಿದೆ. ಹೊಸ ಸೇತುವೆಗೆ ಧಕ್ಕೆ ಆದಲ್ಲಿ ಕಾರವಾರ-ಗೋವಾ ಮಾರ್ಗದ ಸಂಚಾರಕ್ಕೆ ತೊಡಕಾಗಲಿದೆ. ಮಂಗಳವಾರ ಪಿಲ್ಲರಿನ ತುಂಡು ಸೇತುವೆಗೆ ತಾಗಿದ ಪರಿಣಾಮ ಸೇತುವೆ ಅಲುಗಾಡಿದ ಅನುಭವವನ್ನು ಅಲ್ಲಿನವರು ಹಂಚಿಕೊoಡಿದ್ದಾರೆ.
ಪಿಲ್ಲರಿನ ತುಂಡು ನಂತರ ನದಿಗೆ ಬಿದ್ದಿದ್ದು, ಈ ವೇಳೆ ಬೇರೆ ಯಾವುದೇ ಸಮಸ್ಯೆ ಆಗಿಲ್ಲ. ಭಾರೀ ಪ್ರಮಾಣದ ಶಬ್ದ ಕೇಳಿಸಿದ ಬಗ್ಗೆಯೂ ಅಲ್ಲಿನವರು ಮಾಹಿತಿ ನೀಡಿದ್ದಾರೆ. ಸದ್ಯ ರಾತ್ರಿ ವೇಳೆಯೂ ಹಳೆ ತೆರವು ಕಾರ್ಯಾಚರಣೆ ಮುಂದುವರೆದಿದೆ. ತಹಶೀಲ್ದಾರ್ ನಿಶ್ಚಲ್ ನರೋನಾ ಸೇರಿ ವಿವಿಧ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಾಳಿ ಸಂಗಮ ಪ್ರದೇಶದ ಮಂಗಳವಾರದ ಸ್ಥಿತಿ-ಗತಿಯ ವಿಡಿಯೋ ಇಲ್ಲಿ ನೋಡಿ.