ಕಾರವಾರ: ರಸ್ತೆ, ಚರಂಡಿ ಅತಿಕ್ರಮಿಸಿ ಗೂಡಂಗಡಿ ವ್ಯಾಪಾರ ನಡೆಸುವವರ ಮೇಲೆ ಗದಾ ಪ್ರಹಾರ ನಡೆಸುವ ನಗರಸಭೆ ಪ್ರಭಾವಿ ವ್ಯಕ್ತಿಗಳ ಬಗ್ಗೆ ಅನುಕಂಪದ ನೀತಿ ಅನುಸರಿಸುತ್ತಿದೆ. ಪಿಕಳೆ ರಸ್ತೆ ತಿರುವಿನಲ್ಲಿ ಪಾರ್ಕಿಂಗ್ ಹಾಗೂ ಚರಂಡಿ ಜಾಗ ಅತಿಕ್ರಮಿಸಿ ಬಹುಮಹಡಿ ಕಟ್ಟಡ ತಲೆ ಎತ್ತಿದರೂ ಇದರ ವಿರುದ್ಧ ನಗರಸಭೆ ಈವರೆಗೂ ಕ್ರಮ ಜರುಗಿಸಿಲ್ಲ!
ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಅನೇಕ ಅಕ್ರಮ ಕಟ್ಟಡಗಳಿವೆ. ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ, ಚರಂಡಿ ಹಾಗೂ ರಸ್ತೆ ಅತಿಕ್ರಮಣ, ಪಾರ್ಕಿಂಗ್ ಪ್ರದೇಶಗಳಲ್ಲಿದೇ ಬಹುಮಹಡಿ ಮಳಿಗೆ ನಿರ್ಮಾಣ ಹೆಚ್ಚಾಗುತ್ತಿದೆ. ಭವಿಷ್ಯದ ಅಪಾಯದ ಬಗ್ಗೆ ಅರಿವಿದ್ದರೂ ನಗರಸಭೆ ಮೌನವಾಗಿದೆ. ಆಯುಷ್ ಆಸ್ಪತ್ರೆಯ ಮುಂಭಾಗದಲ್ಲಿ ಪಿಕಳೆ ರಸ್ತೆಯ ತಿರುವಿನಲ್ಲಿ ನಂದಾ ನೀಲಾವರ ಎಂಬಾತರು ಚರಂಡಿ ಅತಿಕ್ರಮಿಸಿ ಕಟ್ಟಡ ನಿರ್ಮಿಸಿದ್ದು, ಅದರ ವಿರುದ್ಧ ಈವರೆಗೂ ಕ್ರಮವಾಗದ ಬಗ್ಗೆ ಜಯ ಕರ್ನಾಟಕ ಜನಪರ ವೇದಿಕೆ ಪ್ರಶ್ನಿಸಿದೆ.
ಸಾರ್ವಜನಿಕ ಆಸ್ತಿಯನ್ನು ಅದರಲ್ಲಿಯೂ ವೇಗವಾಗಿ ಬೆಳೆಯುತ್ತಿರುವ ಕಾರವಾರ ನಗರದಲ್ಲಿ ಈ ರೀತಿಯ ಭೂ ಕಬಳಿಕೆ ಕಾನೂನೂಬಾಹಿರ ಎನ್ನುವುದು ತಮ್ಮ ಗಮನಕ್ಕೂ ಬಂದಿರಬಹುದು. ಬಡ ಜನರು ಕಟ್ಟಡ ಇಲ್ಲವೇ ಸ್ವಂತ ಜಮೀನನಲ್ಲಿ ಮನೆ ನಿರ್ಮಾಣ ಮತ್ತಿತರ ಕಾರ್ಯ ನಡೆಸಲು ನೂರಾರು ಕಾನೂನು ಕ್ರಮ ಹೇರುವ ಹಾಗೂ ಸಾವಿರಾರು ಶುಲ್ಕ ವಿಧಿಸಿದರೆ ಶ್ರೀಮಂತರ ಅತಿಕ್ರಮಣ ನೀತಿಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ನಮ್ಮ ಸಂಘಟನೆಯ ಪ್ರಶ್ನೆಯಾಗಿದೆ.
ಕಾನೂನು ಕ್ರಮಕ್ಕೆ ಆಗ್ರಹ
`ಇಲ್ಲಿ ಚರಂಡಿ ಅತಿಕ್ರಮಿಸಿ ಅನಧಿಕೃತ ಕಟ್ಟಡ ನಿರ್ಮಿಸಿದವರು ಅಮೃತ ಹೊಟೇಲ್ ಹಿಂದೆ ಸಹ ಪ್ರಮುಖ ಕಾಲುವೆ ಅತಿಕ್ರಮಿಸಿದ್ದಾರೆ. ಅನಧಿಕೃತವಾಗಿ ನಿರ್ಮಿಸಿದ ಕಟ್ಟಡವನ್ನು ಕಾನೂನಿನ ಪ್ರಕಾರ ತೆರವು ಮಾಡಬೇಕು. ಇಲ್ಲವಾದಲ್ಲಿ ಅಂಥವರ ಬಗ್ಗೆ ಮೃದುದೋರಣೆ ಹೊಂದಲು ಸೂಕ್ತ ಕಾರಣ ತಿಳಿಸಬೇಕು’ ಎಂದು ಸಂಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಹೇಳಿದ್ದಾರೆ.
`ನ 7ರಂದು ನಗರಸಭೆ ಪೌರಾಯುಕ್ತರು ಹಾಗೂ ಅಧ್ಯಕ್ಷರಿಗೆ ಈ ಬಗ್ಗೆ ಪತ್ರ ನೀಡಲಾಗಿತ್ತು. ಆದರೆ, ಈವರೆಗೂ ಅವರಿಂದ ಯಾವುದೇ ಹಿಂಬರಹ ಬಂದಿಲ್ಲ. ಅದಾಗಿಯೂ ಮತ್ತೆ 15 ದಿನ ಗಡುವು ನೀಡಲಾಗುತ್ತಿದ್ದು, ಅಷ್ಟರೊಳಗೆ ಕಾನೂನು ಕ್ರಮ ಜರುಗಿಸಬೇಕು’ ಎಂದು ಸಂಘಟನೆ ಪ್ರಮುಖರಾದ ರೋಷನ್ ಹರಿಕಂತ್ರ, ಸುದೇಶ್ ನಾಯ್ಕ, ಸುನಿಲ್ ತಾಂಡೇಲ್, ದಿಲೀಪ್ ನಾಗೇಕರ್, ರಾಹುಲ್ ತಾಂಡೇಲ್ ಹಾಗೂ ದಿಲೀಪ್ ಉಳೇಕರ್ ಆಗ್ರಹಿಸಿದರು.
`ನಗರಸಭೆಯಿಂದ ಯಾವುದೇ ಉತ್ತರ ಬರದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಅನಿವಾರ್ಯ. ಜಯಕರ್ನಾಟಕ ಜನಪರ ವೇದಿಕೆ ರಾಜ್ಯ ಸಮಿತಿಯೂ ಅಕ್ರಮ ಕಟ್ಟಡಗಳ ವಿರುದ್ಧ ಲೋಕಾಯುಕ್ತ ಹೋರಾಟಕ್ಕೆ ನಿರ್ಧರಿಸಿದೆ’ ಎಂದು ಸಂಘಟನೆ ತಾಲೂಕು ಅಧ್ಯಕ್ಷ ಮೋಹನ ಉಳ್ವೇಕರ್, ಪ್ರಮುಖರಾದ ಅಜಿತ್ ತಳೇಕರ್, ಕಾರ್ತಿಕ್ ಹರಿಕಂತ್ರ, ಶ್ರೀನಿವಾಸ ಹರಿಕಂತ್ರ ವಿವರಿಸಿದರು. ಈ ಬಗ್ಗೆ ಎಲ್ಲರೂ ಸೇರಿ ಮಂಗಳವಾರ ಜಿಲ್ಲಾಡಳಿತಕ್ಕೂ ಲಿಖಿತ ಪತ್ರ ಸಲ್ಲಿಸಿದರು.