ಶಿರಸಿ: ಕಸ್ತೂರಿ ರಂಗನ್ ವರದಿ ಜಾರಿ ವಿಷಯವಾಗಿ ತಾಂತ್ರಿಕ ದೋಷದ ಸ್ಪಷ್ಟನೆ, ಮರು ಸುತ್ತೋಲೆ, ಜನಪ್ರತಿನಿಧಿ ಹಾಗೂ ಜನಾಭಿಪ್ರಾಯ ಸಂಗ್ರಹದ ವರದಿ-ಸಲಹೆಗಳ ಕುರಿತು ಚರ್ಚೆ ನಡೆದಿದೆ. ರಾಜ್ಯ ಸರ್ಕಾರವು ಕಸ್ತೂರಿ ರಂಗನ್ ವರದಿ ವಿಷಯವಾಗಿ ಸೆ 26ರಂದು ಅಂತಿಮ ನಿಲುವು ಪ್ರಕಟಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ `ಕೇಂದ್ರ ಸರ್ಕಾರವು ಕರಡು ಕಸ್ತೂರಿ ರಂಗನ್ ವರದಿ ಕುರಿತು ರಾಜ್ಯ ಸರ್ಕಾರಕ್ಕೆ ಅಭಿಪ್ರಾಯ ಮಂಡಿಸಲು ಸೆ 30ಕ್ಕೆ ಅಂತಿಮ ಅವಧಿ ನಿರ್ದಿಷ್ಟಪಡಿಸಿತ್ತು. ಅದರ ಪ್ರಕಾರ ಜನಪ್ರತಿನಿಧಿಗಳ ಸಭೆಯ ಮೂಲಕ ಅಭಿಪ್ರಾಯ ಕ್ರೂಡಿಕರಿಸಿ ಸೆ 26ರಂದು ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ವರದಿ ತಿರಸ್ಕರಿಸಲು ಹಿರಿಯ ಸಚಿವರನ್ನವೊಳಗೊಂಡು ಮತ್ತು ಹಿರಿಯ ಅಧಿಕಾರಿಗಳನ್ನ ಬೆಂಗಳೂರಿನಲ್ಲಿ ಭೇಟಿ ಮಾಡಿ ಚರ್ಚಿಸಲಾಗಿದೆ’ ಎಂದು ತಿಳಿಸಿದ್ದಾರೆ.
`ಸಾರ್ವಜನಿಕವಾಗಿ ವರದಿ ಅನಿಷ್ಠಾನಕ್ಕೆ ತೀವ್ರ ತರದ ವಿರೋಧ ವ್ಯಕ್ತವಾಗಿದೆ. ಕರಡು ವರದಿಯಲ್ಲಿನ ಅಂಶಗಳು ಅವೈಜ್ಞಾನಿಕವಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದಿಂದ ಇನ್ನಷ್ಟು ಸ್ಪಷ್ಠೀಕರಣ ಬಯಸಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಬೇಕಿದೆ’ ಎಂದವರು ಹೇಳಿದರು. ವರದಿಗೆ ಪ್ರಬಲ ವಿರುದ್ಧ ಇರುವ ಹಿನ್ನಲೆಯಲ್ಲಿ ಜನಪರ ನಿಲುವು ತೆಗೆದುಕೊಳ್ಳುವುದಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ ಹಾಗೂ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದ್ದಾರೆ. ಸಚಿವ ಮಂಕಾಳ ವೈದ್ಯ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸಹ ವರದಿ ಜಾರಿಗೆ ವಿರೋಧಿಸಿದ್ದಾರೆ.