ಶಿರಸಿ: ರಾಷ್ಟ್ರೀಯ ಆದ್ಯತಾ ಸಂಸ್ಥೆ ನಡೆಸಿದ ವೈದ್ಯಕೀಯ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಡಾ ಕೌಶಿಕ್ ಡಿ ಅವರು ಮೂರು ವರ್ಷ ಪದವಿಯ ಕ್ರಿಟಿಕಲ್ ಕೇರ್ ಮೆಡಿಸಿನ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ಡಾ ಕೌಶಿಕ್ ಅವರು ಈ ಹಿಂದೆ ಶಿರಸಿ ಡಿಡಿಪಿಐ ಆಗಿದ್ದ ದಿವಾಕರ ಶೆಟ್ಟಿ ಅವರ ಪುತ್ರ. ಡಾ ಕೌಶಿಕ್ ಅವರು 1ರಿಂದ 7ನೇ ತರಗತಿಯವರೆಗೆ ಅವರು ಓದಿದ್ದು ಸರ್ಕಾರಿ ಶಾಲೆಯಲ್ಲಿ. ಕುಂದಾಪುರದ ಮೂಡುಗಿಳಿಯಾರಿನ ಕನ್ನಡ ಶಾಲೆ ಸೇರಿದ ಅವರು ಬಾಲ್ಯದಿಂದಲೂ ವೈದ್ಯಕೀಯ ಕ್ಷೇತ್ರದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು.
7ನೇ ತರಗತಿ ಮುಗಿದ ನಂತರ ಕೋಟಾದಲ್ಲಿ ಆಂಗ್ಲ ಶಾಲೆ ಪ್ರವೇಶಿಸಿದ ಅವರು ನಿರಂತರ ಅಧ್ಯಯನದ ಮೂಲಕ ಮುನ್ನಡೆ ಸಾಧಿಸಿದರು. ಭುವನೇಶ್ವರದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂಡಿ ಪದವಿ ಮುಗಿಸಿದರು. ಅದಾದ ನಂತರ ನವ ದೆಹಲಿಯ ಏಮ್ಸ್’ನಲ್ಲಿ ಸೇವೆ ಸಲ್ಲಿಸಿದ್ದರು. ಇದೀಗ ಡಾ ಕೌಶಿಕ್ ಅವರು ಲಕ್ನೋದ ಸಂಜಯ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯ `ಕ್ರಿಟಿಕಲ್ ಕೇರ್ ಮೆಡಿಸಿನ್ ಡಿಪ್ಲೊಮಾ ಕೋರ್ಸ್ ಆಯ್ಕೆ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.
ಕನ್ನಡ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ ಡಾ ಕೌಶಿಕ್ ಅವರ ಬಗ್ಗೆ ಯಲ್ಲಾಪುರದ ಸವಣಗೇರಿಯ ಕನ್ನಡ ಶಾಲೆ ಮುಖ್ಯ ಶಿಕ್ಷಕರ ಸಂಜೀವ ಹೊಸ್ಕೇರಿ ಸಂತಸ ವ್ಯಕ್ತಪಡಿಸಿದರು. `ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಬೇಕು’ ಎಂದು ಯಲ್ಲಾಪುರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೂ ಆಗಿರುವ ಸಂಜೀವ ಹೊಸ್ಕೇರಿ ಮನವಿ ಮಾಡಿದರು.