ಗಗನದ ಸ್ಪರ್ಶಕ್ಕೆ ಕಾದು ನಿಂತoತಿರುವ ಬೆಟ್ಟ-ಗುಡ್ಡಗಳು, ರಭಸದಿಂದ ಧುಮುಕಿ ಶಾಂತವಾಗಿ ಸಾಗುವ ಜಲಪಾತಗಳು, ಸದ್ದಿಲ್ಲದೇ ತಮ್ಮ ಪಾಡಿಗೆ ಹರಿದು ನೆಲಕ್ಕೆ ತಂಪೆರೆಯುತ್ತಿರುವ ಹೆಸರಿಲ್ಲದ ನೂರಾರು ತೊರೆಗಳು, ವಿಶಾಲವಾಗಿ ಹರಡಿ ಅಸಂಖ್ಯ ಜೀವಸಂಕುಲಗಳಿಗೆ ಮನೆಯಾಗಿರುವ ಕೆರೆಗಳು.. ಹೀಗೆ ಈ ವನ ಶ್ರೀಮಂತಿಕೆಯ ಖಜಾನೆಯಲ್ಲಿ ಎಣಿಸಿದರೂ ಮುಗಿಯದಷ್ಟು ಸಂಪತ್ತಿನ ರಾಶಿ ಯಲ್ಲಾಪುರದಲ್ಲಿದೆ.
ಇತಿಹಾಸದ ಕಥೆಯನ್ನು ಸಾರಿ ಹೇಳುತ್ತಿರುವ ಪ್ರಾಚೀನ ದೇವಾಲಯಗಳು,ಶಾಸನಗಳೂ ಆ ರಾಶಿಯಲ್ಲಿ ಸೇರಿಕೊಂಡಿವೆ. ಪ್ರವಾಸಿಗರ ಕಣ್ಣಿಗೆ ಸ್ವರ್ಗದಂತೆ ಕಂಗೊಳಿಸುವ ನಿಸರ್ಗ ಸಿರಿಯೇ ಇಲ್ಲಿದೆ. ಇವುಗಳ ನಡುವೆ ಪ್ರವಾಸೀ ತಾಣವಾಗಿಯೂ,ಪವಿತ್ರ ಕ್ಷೇತ್ರವಾಗಿಯೂ ತನ್ನೆಡೆ ಜನರನ್ನು ಸೆಳೆಯುತ್ತಿರುವ ಪ್ರದೇಶ ಕವಡಿಕೆರೆ. ಮಾಗೋಡು ಮಾರ್ಗದಲ್ಲಿ 6 ಕಿ.ಮೀ ಸಾಗಿದರೆ ವಿಶಾಲವಾದ ಈ ಕವಡಿಕೆರೆ ಸಿಗುತ್ತದೆ. ಸುಮಾರು 62 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ಐತಿಹಾಸಿಕ ಕೆರೆಯ ದಡದಲ್ಲಿ ದುರ್ಗಾಂಬಿಕಾ ದೇವಾಲಯವಿದೆ. ಈ ಕೆರೆ ಹಾಗೂ ದೇವಾಲಯಗಳ ಕುರಿತು ಇತಿಹಾಸ 2-3 ಬಗೆಯ ಕಥೆಗಳನ್ನು ಹೇಳುತ್ತದೆ. `ಪಾಂಡವರು ವನವಾಸದಲ್ಲಿದ್ದ ಸಂದರ್ಭದಲ್ಲಿ,ಈ ಪ್ರದೇಶದಲ್ಲಿ ಹಾದು ಹೋಗುತ್ತಿರುವಾಗ ಅವರ ಪತ್ನಿ ದ್ರೌಪದಿಗೆ ಬಾಯಾರಿಕೆಯಾಯಿತು. ಅವಳು ಭೀಮನನ್ನು ನೀರು ತರುವಂತೆ ಕೇಳಿದಳು. ಎಷ್ಟು ಅಲೆದರೂ ನೀರು ಸಿಗದಿದ್ದಾಗ ಭೀಮ ದೇವಿಯನ್ನು ಪ್ರಾರ್ಥಿಸಿದ. ದೇವಿಯು ಗಂಗಾನದಿಯ ನೀರನ್ನು ಪಡೆಯಲು ಶಕ್ತಿ ಅನುಗ್ರಹಿಸುವುದರೊಂದಿಗೆ ಇಲ್ಲಿಯೇ ಕೆರೆಯನ್ನು ಹಾಗೂ ದೇವಾಲಯವನ್ನು ಸ್ಥಾಪಿಸುವಂತೆ ಹೇಳಿದಳು. ಅದರಂತೆ ಭೀಮ ಈ ಕೆರೆ ನಿರ್ಮಿಸಿದ’ ಎಂಬುದೊoದು ಕಥೆ.
`ಭೀಮ ಆಹಾರಕ್ಕಾಗಿ ಹಣ್ಣು ಹಂಪಲುಗಳನ್ನು ಅರಸುತ್ತ ಕಾಡಿನಲ್ಲಿ ಅಲೆಯುತ್ತಿದ್ದಾಗ ಇಂಪಾದ ಸಂಗೀತವೊoದು ಕೇಳಿ ಬಂತು. ಅದರ ಮೂಲವನ್ನು ಹುಡುಕಿ ಹೊರಟ ಆತನಿಗೆ ದುರ್ಗಾ ಮೂರ್ತಿಯೊಂದು ಕಣ್ಣಿಗೆ ಬಿತ್ತು. ದುರ್ಗಾದೇವಿಯು ಪ್ರತ್ಯಕ್ಷಳಾಗಿ ಕಾಶಿಯಿಂದ ಗಂಗೆಯ ನೀರನ್ನು ಕವಡೆಯಲ್ಲಿ ತಂದು ಇಲ್ಲಿ ಸ್ಥಾಪಿಸುವಂತೆ ಆಜ್ಞಾಪಿಸಿದಳು. ಅದರಂತೆ ಭೀಮ ಕೆರೆಯನ್ನು ನಿರ್ಮಿಸಿ ದಡದಲ್ಲಿ ದುರ್ಗಾಮೂರ್ತಿಯನ್ನು ಪ್ರತಿಷ್ಠಾಪಿಸಿದ’ ಎಂಬ ಕಥೆಯೂ ಇದೆ. ಇನ್ನೊಂದೆಡೆ ಭೀಮನು ಕಾಡಿನಲ್ಲಿ ಅಲೆಯುತ್ತಿದ್ದಾಗ ಬಾಯಾರಿಕೆಯನ್ನು ತಾಳಲಾರದೇ ಕೋಪದಿಂದ ತನ್ನ ಕಾಲಿನ ಹೆಬ್ಬೆರಳಿನಿಂದ ತಿವಿದು ಕೆರೆಯನ್ನು ಸೃಷ್ಟಿಸಿದ ಎಂಬ ಕಥೆಯಿದೆ. ನೂರಾರು ಜಾತಿಯ ಜಲಚರಗಳಿಗೆ ಆಶ್ರಯ ತಾಣವಾಗಿರುವ ಕವಡಿಕೆರೆ ಇತ್ತೀಚೆಗೆ ಉತ್ತಮ ಪ್ರವಾಸಿತಾಣವಾಗಿಯೂ ಪ್ರಸಿದ್ಧವಾಗಿದೆ. ಭೀಕರ ಬರಗಾಲ ಬಂದರೂ ಸಹ ಬತ್ತದೇ ಇರುವುದು ಈ ಕೆರೆಯ ವಿಶೇಷತೆ.
– ಶ್ರೀಧರ ವೈದಿಕ
Discussion about this post