ರಸ್ತೆ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಮುಂಡಗೋಡಿನ ವ್ಯಕ್ತಿಗೆ ಹೊನ್ನಾವರದಲ್ಲಿ ವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ಸು ಡಿಕ್ಕಿ ಹೊಡೆದಿದೆ. ಪರಿಣಾಮ ಪಾದಚಾರಿಯ ತಲೆ, ಮುಖ, ಎದೆ, ಹೊಟ್ಟೆ ಸೇರಿ ವಿವಿಧ ಕಡೆ ಗಾಯವಾಗಿದೆ.
ಮುಂಡಗೋಡ ತೆಂಗಿನಕೊಪ್ಪ ಬಳಿಯ ಚೌಡಳ್ಳಿ ರಾಮ ಕೃಷ್ಣ ಸಿಂಧೆ (56) ಅವರು ಹೊನ್ನಾವರದ ಹಳದಿಪುರ ಬಳಿಯ ಸಾಲಕೇರಿಯಲ್ಲಿ ವಾಸವಾಗಿದ್ದಾರೆ. ಮಾರ್ಚ 9ರಂದು ಸಂಜೆ 5 ಗಂಟೆಗೆ ಅವರು ಅಲ್ಲಿನ ದತ್ತಾತ್ರೇಯ ಸ್ಟೋರ್ ಕಡೆ ನಡೆದು ಹೋಗುತ್ತಿದ್ದರು. ಆಗ, ಕಾರವಾರ ಕಡೆಯಿಂದ ವೇಗವಾಗಿ ಬಂದ ಬಸ್ಸು ಅವರಿಗೆ ಡಿಕ್ಕಿಯಾಯಿತು.
ಹಾಸನ ಮೂಲದ ಬಸ್ ಚಾಲಕ ಶಂಕರ ಗೌಡ ಸದ್ಯ ಭಟ್ಕಳ ಡಿಪೋದಲ್ಲಿ ಕೆಲಸಕ್ಕಿದ್ದು, ಅವರು ಆ ಬಸ್ಸು ಚಲಾಯಿಸುತ್ತಿದ್ದರು. ಕಾರವಾರದಿಂದ ಹೊನ್ನಾವರ ಕಡೆ ಅವರು ಬಸ್ಸು ಓಡಿಸುವಾಗ ಹಳದಿಪುರ ಸಾಲಗೇರಿಯ ಪ್ರಭು ಗೂಡಂಗಡಿ ಬಳಿ ರಾಮ ಸಿಂದೆ ಅವರಿಗೆ ತಮ್ಮ ವಾಹನ ಗುದ್ದಿದರು.
ಈ ಅಪಘಾತದ ಪರಿಣಾಮ ರಾಮ ಸಿಂದೆ ಗಾಯಗೊಂಡು ಆಸ್ಪತ್ರೆ ಸೇರಿದರು. ಸದ್ಯ ಹೊನ್ನಾವರದ ಹಳದಿಪುರ ಸಾಲಿಕೇರಿಯಲ್ಲಿ ವಾಸವಾಗಿರುವ ಮುಂಡಗೋಡ ಮೈನಳ್ಳಿಯ ಸಂಜು ಸಿಂಧೆ ಅವರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿಗೆ ಆಗಮಿಸಿದ ಪೊಲೀಸರ ಬಳಿ ಅಪಘಾತದ ವಿಷಯ ತಿಳಿಸಿದ್ದು, ಅದಾದ ನಂತರ ಬಸ್ಸಿನ ಚಾಲಕ ಶಂಕರ ಗೌಡ ವಿರುದ್ಧ ದೂರು ನೀಡಿದರು.