ಯಲ್ಲಾಪುರದಿಂದ ಮಾಗೋಡಿಗೆ ತೆರಳುವ ಬಸ್ಸಿನಲ್ಲಿ ಅರ್ದ ಕೆಜಿ ಒಣ ಮೆಣಸು ಒಯ್ಯುತ್ತಿದ್ದ ಮಹಿಳೆಯರನ್ನು ಬಸ್ಸಿನಿಂದ ಕೆಳಗಿಳಿಸಿದ್ದಾರೆ. ಬಸ್ಸಿನಿಂದ ಇಳಿಯಲು ಒಪ್ಪದವರ ಮೈಮುಟ್ಟಿದ ಸಾರಿಗೆ ಸಿಬ್ಬಂದಿ ಮಹಿಳೆಯರನ್ನು ಕೆಳಗೆ ದೂಡಿದ್ದಾರೆ. ಭಾನುವಾರ ಸಂತೆಗೆ ಬಂದಿದ್ದ ಮಹಿಳೆಯರು ಒಣ ಮೆಣಸು ಖರೀದಿಸಿ ಅನ್ಯಾಯಕ್ಕೆ ಒಳಗಾಗಿದ್ದಾರೆ!
ಮಾಗೋಡಿನ ಲಲಿತಾ ಭಾಗ್ವತ ಹಾಗೂ ಮಂಗಲಾ ನಾಯ್ಕ ಭಾನುವಾರದ ಸಂತೆಗಾಗಿ ಯಲ್ಲಾಪುರಕ್ಕೆ ಬಂದಿದ್ದರು. ತರಕಾರಿ ಖರೀದಿಸಿದ ನಂತರ ಅವರು ಮಾಗೋಡಿಗೆ ಮರಳುವ ಬಸ್ಸು ಹತ್ತಿದ್ದರು. 11.15ಕ್ಕೆ ಹೊರಡುವ ಬಸ್ಸಿನಲ್ಲಿ ಅವರು ಶಕ್ತಿ ಯೋಜನೆಯ ಟಿಕೆಟ್ ಸಹ ಪಡೆದಿದ್ದರು. ಆದರೆ, ಬಸ್ ನಿರ್ವಾಹಕ ಬಸವರಾಜ್ ಅವರು ಒಣ ಮೆಣಸು ನೋಡಿ ಸಿಡಿಮಿಡಿಗೊಂಡರು.
ಆ ಇಬ್ಬರು ಮಹಿಳೆಯರನ್ನು ಬಸ್ಸಿನಿಂದ ಕೆಳಗಿಳಿಸಿದರು. ಮಂಗಲಾ ನಾಯ್ಕ ಅವರ ಜೊತೆಗಿದ್ದ ಮಗ ರಾಜೇಶ ನಾಯ್ಕ ಅವರ ಟಿಕೆಟ್ ಹಣವನ್ನು ಮರಳಿಸಿ, ಅವರನ್ನು ಬಸ್ಸಿನಿಂದ ಹೊರದಬ್ಬಿದರು. ಸಮಯಕ್ಕೆ ಸರಿಯಾಗಿ ಮನೆಗೆ ಮರಳಲಾಗದ ಮಹಿಳೆಯರು ನಂದೂಳ್ಳಿಯ ನಾಯಕ ನರಸಿಂಹ ಕೋಣೆಮನೆ ಅವರಿಗೆ ಪೋನ್ ಮಾಡಿದರು. ಬಸ್ ನಿಲ್ದಾಣಕ್ಕೆ ದೌಡಾಯಿಸಿದ ನರಸಿಂಹ ಕೋಣೆಮನೆ ಅನ್ಯಾಯಕ್ಕೊಳ್ಳದಾದವರ ಜೊತೆ ಸೇರಿ ಧರಣಿ ಕುಳಿತರು.
`ಮಹಿಳೆಯರನ್ನು ಗೌರವಯುತವಾಗಿ ಅವರ ಮನೆಗೆ ಮುಟ್ಟಿಸಿ ಬರಬೇಕು’ ಎಂದು ಪಟ್ಟುಹಿಡಿದರು. ಬಸ್ ನಿಲ್ದಾಣದಲ್ಲಿದ್ದ ಇತರೆ ಪ್ರಯಾಣಿಕರು ಆಗಮಿಸಿ ಪ್ರತಿಭಟನೆಗೆ ಬೆಂಬಲ ನೀಡಿದರು. ಡಿಪೋ ವ್ಯವಸ್ಥಾಪಕ ಸಂತೋಷ ವರ್ಣೆಕರ್ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲೈಸಲು ಪ್ರಯತ್ನಿಸಿದರು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. `ಕೂಡಲೇ ವಿಶೇಷ ಬಸ್ ಮೂಲಕ ಮಹಿಳೆಯರನ್ನು ಊರಿಗೆ ತಲುಪಿಸಬೇಕು’ ಎಂದು ಒತ್ತಾಯಿಸಿದರು. ಕೊನೆಗೆ 1.45ಕ್ಕೆ ಬಿಡುವ ಬಸ್ಸನ್ನು 1.30ಕ್ಕೆ ಮಾಗೋಡಿಗೆ ಕಳುಹಿಸಿ ಪ್ರತಿಭಟನಾಕಾರರನ್ನು ಸಮಾಧಾನ ಮಾಡಲಾಯಿತು.
ಕ್ಷಮೆ ಯಾಚನೆ:
`ಒಣ ಮೆಣಸನ್ನು ದೊಡ್ಡ ಪ್ರಮಾಣದಲ್ಲಿ ಬಸ್ಸಿನಲ್ಲಿ ಒಯ್ಯುವ ಹಾಗಿಲ್ಲ. ಬೇರೆಯವರಿಗೆ ತೊಂದರೆಯಾಗದ ರೀತಿ ಸಣ್ಣ ಪ್ರಮಾಣದಲ್ಲಿ ಒಯ್ಯಲು ತಕರಾರು ಇಲ್ಲ’ ಎಂದು ಸಾರಿಗೆ ಸಿಬ್ಬಂದಿ ಸಮಜಾಯಿಶಿ ನೀಡಿದರು. ನಿರ್ವಾಹಕ ಮಾಡಿದ ತಪ್ಪಿಗೆ ಘಟಕದ ಇತರೆ ಸಿಬ್ಬಂದಿ ಕ್ಷಮೆ ಕೋರಿದರು. ಅದಾಗಿಯೂ, ಪ್ರತಿಭಟನಾಕಾರ ಒತ್ತಾಯದ ಮೇರೆಗೆ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ಬಸ್ ನಿರ್ವಾಹಕರ ವಿರುದ್ಧ ಕ್ರಮ ಜರುಗಿಸುವುದಾಗಿ ಡಿಪೋ ವ್ಯವಸ್ಥಾಪಕ ಸಂತೋಷ ವರ್ಣೇಕರ್ ಭರವಸೆ ನೀಡಿದರು.
`ನಾಳೆಯಿಂದ ಈ ಬಸ್ ಸಿಬ್ಬಂದಿ ಮಾಗೋಡು ಕಡೆ ಕರ್ತವ್ಯ ನಿರ್ವಹಿಸುವ ಹಾಗಿಲ್ಲ. ಬಸ್ಸಿನಲ್ಲಿ ಯಾವ ವಸ್ತು ಒಯ್ಯುವುದು ನಿಷೇಧ ಎನ್ನುವದರ ಬಗ್ಗೆ ನಿಲ್ದಾಣದಲ್ಲಿ ನಾಮಫಲಕ ಅಳವಡಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದಕ್ಕೆ ಅಧಿಕಾರಿಗಳು ಸಮ್ಮತಿ ಸೂಚಿಸಿದರು.