ಯಲ್ಲಾಪುರ: ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಮೈ ಮುಟ್ಟಿದ ಕೆಎಸ್ಆರ್ಟಿಸಿ ಬಸ್ ನಿರ್ವಾಹಕನಿಗೆ ಕಿರವತ್ತಿಯ ಜನ ಧರ್ಮದೇಟು ನೀಡಿದ್ದಾರೆ. 15ಕ್ಕೂ ಅಧಿಕ ಜನರಿಂತ ಥಳಿತಕ್ಕೆ ಒಳಗಾದ ಕಂಡೆಕ್ಟರ್ ಸಿದ್ದಪ್ಪ ಬೀರಾದರ್ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದು, ಅನುಚಿತ ವರ್ತನೆ ಆರೋಪದ ಅಡಿ ಆತನ ಮೇಲೆಯೂ ಪ್ರಕರಣ ದಾಖಲಾಗಿದೆ.
ಯಲ್ಲಾಪುರ ತಾಲೂಕಿನ ಮದನೂರಿನ ಅಲ್ಕೇರಿ ಬಳಿಯ ನಿರ್ಮಲಾ ಶಿಂಧೆ (20 ವರ್ಷ – ಹೆಸರು ಬದಲಿಸಿದೆ) ಅವರು ಮಂಗಳವಾರ ಹುಬ್ಬಳ್ಳಿಗೆ ಹೋಗಿದ್ದರು. ಸಂಜೆ 4.30ರ ವೇಳೆಗೆ ಮನೆಗೆ ಮರಳುವುದಕ್ಕಾಗಿ ಅವರು ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಬಳಿ ಬಸ್ ಹತ್ತಿದ್ದರು. ನಿರ್ಮಲಾ ಅವರ ಮಾವನ ಮಗ ಸುಂದರ್ ಎಂಬಾತ ಹುಬ್ಬಳ್ಳಿಯ ಭಾರತ್ ಮಿಲ್ ಬಳಿ ಅದೇ ಬಸ್ಸು ಹತ್ತಬೇಕಿದ್ದು, ಸುಂದರ್ ಅವರು ಬಸ್ಸು ಹತ್ತದ ಕಾರಣ ನಿರ್ಮಲಾ ಅವರು ಇಂಡಿ ಪೆಟ್ರೋಲ್ ಬಂಕ್ ಬಳಿ ಬಸ್ಸು ಇಳಿಯಲು ಬಯಸಿದ್ದರು. ಆದರೆ, ಆ ವೇಳೆ ವಿದ್ಯಾರ್ಥಿನಿಗೆ ಬಸ್ಸಿನಿಂದ ಇಳಿಯಲು ಕಂಡೆಕ್ಟರ್ ಸಿದ್ದಪ್ಪ ಬೀರಾದರ್ ಬಿಡಲಿಲ್ಲ. ಈ ಬಸ್ಸು ಯಲ್ಲಾಪುರದಿಂದ ಹುಬ್ಬಳ್ಳಿಗೆ ಹೋಗಿ, ಶಿರಸಿ-ಮಂಗಳೂರು ಸುತ್ತಾಡಿ ಮತ್ತೆ ಮಂಗಳೂರಿನಿAದ ಹುಬ್ಬಳ್ಳಿ ಮಾರ್ಗವಾಗಿ ಯಲ್ಲಾಪುರಕ್ಕೆ ಬರುತ್ತಿತ್ತು.
`ಯಾರೋ ಒಬ್ಬ ಫೋನ್ ಮಾಡಿದ ಅಂತ ಬಸ್ಸಿನಿಂದ ಇಳಿದು ಸಾಯುತ್ತೀಯಾ?’ ಎಂದು ಪ್ರಶ್ನಿಸಿದ ಕಂಡೆಕ್ಟರ್ ಸಿದ್ದಪ್ಪ ಬೀರಾದರ್ ವಿದ್ಯಾರ್ಥಿನಿಯ ಎದೆಗೆ ಕೈ ಹಾಕಿ ದೂಡಿದರು. ಅದಾದ ನಂತರ ನಿರ್ಮಲಾ ಶಿಂಧೆ ಅವರ ಕೈ ಹಿಡಿದು ಎಳೆದಾಡಿದರು. ಜೊತೆಗೆ `ಪ್ರೀ ಬಸ್ ಅಂತ ಫೋನ್ ಹಿಡಿದು ಧಿಮಾಕು ಮಾಡುತ್ತೀಯಾ?’ ಎಂದು ಪ್ರಶ್ನಿಸಿ ಕೆಟ್ಟದಾಗಿ ನಿಂದಿಸಿದರು. ಇದರಿಂದ ಸಿಟ್ಟಾದ ನಿರ್ಮಲಾ ಶಿಂಧೆ ಊರಿನ ಪ್ರಮುಖರಿಗೆ ಫೋನ್ ಮಾಡಿ ತನಗಾದ ಅನ್ಯಾಯದ ಬಗ್ಗೆ ದೂರಿದ್ದರು. ಆ ಬಸ್ಸು ಕಿರವತ್ತಿಗೆ ಬರುವುದನ್ನು ಕಾಯುತ್ತಿದ್ದ 15ಕ್ಕೂ ಅಧಿಕ ಜನ ವಿದ್ಯಾರ್ಥಿನಿ ಬಸ್ಸಿನಿಂದ ಇಳಿದ ತಕ್ಷಣ ಕಂಡೆಕ್ಟರ್’ಗೆ ಹಿಗ್ಗಾಮುಗ್ಗ ಥಳಿಸಿದರು.
ಈ ವೇಳೆ ಸಿಟ್ಟಾಗಿದ್ದ ವಿದ್ಯಾರ್ಥಿನಿ ನಿರ್ಮಲಾ ಶಿಂಧೆ ಸಹ ತನ್ನ ಚಪ್ಪಲಿಯಿಂದ ಕಂಡೆಕ್ಟರ್’ಗೆ ಚಪ್ಪಲಿಯಿಂದ ಹೊಡೆದರು. ಆ ವೇಳೆ ಬಸ್ಸಿನ ಚಾಲಕ ಕಂಡೆಕ್ಟರನ್ನು ರಕ್ಷಿಸಿದರು. ಈ ಪ್ರಕರಣಕ್ಕೆ ಸಂಬ0ಧಿಸಿ ಕಂಡೆಕ್ಟರ್ ಅನುಚಿತ ವರ್ತನೆಯ ಬಗ್ಗೆ ವಿದ್ಯಾರ್ಥಿನಿ ಪೊಲೀಸ್ ದೂರು ನೀಡಿದ್ದು, ಪಿಎಸ್ಐ ನಸ್ರೀನತಾಜ್ ಬೆಟ್ಟರಗಿ ತನಿಖೆ ನಡೆಸುತ್ತಿದ್ದಾರೆ. ಕಂಡೆಕ್ಟರ್ ಸಿದ್ದಪ್ಪ ಬೀರಾದರ್ ಸಹ `ವಿದ್ಯಾರ್ಥಿನಿಯಿಂದ ತನಗೆ ತೊಂದರೆಯಾಗಿದೆ’ ಎಂದು ದೂರು ನೀಡಿದ್ದು, ಪಿಎಸ್ಐ ಸಿದ್ದಪ್ಪ ಗುಡಿ ವಿಚಾರಣೆ ನಡೆಸಿದ್ದಾರೆ.