1 ಲಕ್ಷ ರೂಪಾಯಿಗೆ ಪ್ರತಿ ತಿಂಗಳು 30 ಸಾವಿರಕ್ಕೂ ಅಧಿಕ ಬಡ್ಡಿ ವಸೂಲಿ ಮಾಡುತ್ತಿದ್ದ ಅನಧಿಕೃತ ಬಡ್ಡಿ ಉದ್ಯಮಿಗಳಿಗೆ ಇದೀಗ ಮಂಡೆಬಿಸಿ ಶುರುವಾಗಿದೆ. ಅಕ್ರಮ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಾಲು ಸಾಲು ಪ್ರಕರಣಗಳು ದಾಖಲಾಗುತ್ತಿವೆ.
ಶಿರಸಿಯ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅಜಿತ್ಅಣ್ಣಪ್ಪ ಶಿರಹಟ್ಟಿ ಮುಂಡಗೋಡಿನ ಕೆಲ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ಬಡ್ಡಿ ವ್ಯವಹಾರ ನಡೆಸುವವರನ್ನು ಬಯಲಿಗೆಳೆದಿದ್ದಾರೆ. ದಾಖಲೆಗಳ ಜೊತೆ ಅವರು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇದರೊಂದಿಗೆ ಮೀಟರ್ ಬಡ್ಡಿ ಸೇರಿ ರೌಡಿಗಳನ್ನು ವೈಭವಿಕರಿಸಿ ಮೆರವಣಿಗೆ ಮಾಡುತ್ತಿದ್ದವರ ವಿರುದ್ಧ ಮುಂಡಗೋಡು ಸಿಪಿಐ ರಂಗನಾಥ ನೀಲಮ್ಮನವರ್ ಸಹ ಪ್ರಕರಣ ದಾಖಲಿಸಿದ್ದಾರೆ. ಮೀಟರ್ ಬಡ್ಡಿಗೆ ಕಾಸು ಪಡೆದು ಸುಸ್ತಾದವರು ಸಹ ಪೊಲೀಸ್ ಠಾಣೆಯ ಮೆಟ್ಟಿಲೇರಿ ನ್ಯಾಯ ಕೊಡಿಸುವಂತೆ ಕೋರಿ ದೂರು ದಾಖಲಿಸಿದ್ದಾರೆ.
ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅಜಿತ್ಅಣ್ಣಪ್ಪ ಶಿರಹಟ್ಟಿ ಅವರ ಪ್ರಕಾರ ಮುಂಡಗೋಡಿನ ಮಂಜುನಾಥ ಹೋಟೇಕರ್ (26) ಅವರ ಮನೆಯಲ್ಲಿ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬAಧಿಸಿದ 6 ಚೆಕ್ ಸಿಕ್ಕಿದೆ. ಇದರೊಂದಿಗೆ ಮೂರು ಇ-ಸ್ಪಾಂಪ್ ಪೆಪರ್ ಸಹ ದೊರೆತಿದೆ. ರಾಜೇಂದ್ರ ಗುಡಮನಿ ಹಾಗೂ ಕಿರಣ ಬೋವಿ ಎಂಬಾತರ ಸಹಿ ಹೊಂದಿರುವ ಚೆಕ್ ದೊರೆತಿರುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಮಕ್ಬೂಲ್ ಯಳ್ಳೂರು ಎಂಬಾತರ ಮನೆ ಶೋಧ ನಡೆಸಿದಾಗ ಅಲ್ಲಿ 4 ಚೆಕ್ಕುಗಳು ಸಿಕ್ಕಿದೆ. ಖಾಜಾ ಮೈನುದ್ಧೀನ್ ಖೇಜಿ ಹಾಗೂ ಪ್ರಕಾಶ ಬೋವಿವಡ್ಡರ್ ಎಂಬಾತರ ಸಹಿ ಹೊಂದಿದ ಚೆಕ್ ಅದಾಗಿದ್ದು, ಇದರಿಂದ ಮಂಜುನಾಥ ಹೋಟೇಕರ್ ಹಾಗೂ ಮಕ್ಬೂಲ್ ಯಳ್ಳೂರು ಯಾವುದೇ ಪರವಾನಿಗೆ ಪಡೆಯದೇ ಮೀಟರ್ ಬಡ್ಡಿ ನಡೆಸುತ್ತಿದ್ದ ಬಗ್ಗೆ ಅಜಿತ್ಅಣ್ಣಪ್ಪ ಶಿರಹಟ್ಟಿ ದೂರಿದ್ದಾರೆ.
ಇನ್ನೂ ಹಣ್ಣು ವ್ಯಾಪಾರಿ ಕರಿಂಖಾನ್ ಜಾದವಾಲೆ ಎಂಬಾತರು ಮೀಟರ್ ಬಡ್ಡಿ ನೀಡಿ ತೊಂದರೆ ನೀಡುವವರ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ. `ಜಮೀರ ಅಹ್ಮದ್ ದುರ್ಗಾವಾಲೆ ಬಳಿ ಪಡೆದ 30 ಸಾವಿರ ರೂಪಾಯಿ ಸಾಲಕ್ಕಾಗಿ ಬಡ್ಡಿ ಸೇರಿ 60 ಸಾವಿರ ವಸೂಲಿ ಮಾಡಲಾಗುತ್ತಿದೆ. ಮದರಷ್ ಮುಕಂದರ್, ಮಕ್ಬುಲ್ ಮಹಮದ್ ಯಳ್ಳೂರು, ಮಹ್ಮದ್ ಸಾಧೀಕ ಜಾವೂರ, ನಾಬಿರಾಜ ಅಂಗಡಿ, ಮಂಜು ನವಲೆ, ದೀಪಕ ರೊಟ್ಕಿಡವಾಡ, ರಾಹುಲ್ ಹುಲಿಯಪ್ಪನವರ, ಶಾಹೀಲ ಜೀಲಾನಿ, ಮಧುಸಿಂಗ ರಜಪೂತ, ಮಹಮದ್ ಸಾಧೀಕ್, ವಾಸಿಮಖಾನ ಬಂಡಿಗೇರಿ, ಶಬಿರ ಮಸ್ತಮದಾನಿ ಎಂಬಾತರು ಮನೆಗೆ ನುಗ್ಗಿ ಈ ಹಣಕ್ಕಾಗಿ ದಾಂಧಲೆ ನಡೆಸಿದ್ದಾರೆ’ ಎಂದು ಕರಂಖಾನ್ ದೂರಿದ್ದಾರೆ. `ಹಣ ಪಾವತಿಸದೇ ಇದ್ದರೆ ಮನೆಯೊಳಗಿನ ಸಾಮಗ್ರಿಗಳನ್ನು ಒಯ್ಯುವುದಾಗಿ ಬೆದರಿಸಿದ್ದಾರೆ. ಕಾಲಾವಕಾಶ ನೀಡುವಂತೆ ಕೇಳಿದರೂ ಕೊಡದೇ ಕಿಸೆಯಲ್ಲಿದ್ದ 5 ಸಾವಿರ ರೂ ದೋಚಿದ್ದಾರೆ’ ಎಂದವರು ಪ್ರಕರಣ ದಾಖಲಿಸಿದ್ದಾರೆ.
ಇನ್ನೂ ಸಾಲಗಾರರನ್ನು ಬೆದರಿಸುವುದಕ್ಕಾಗಿ ರೌಡಿಗಳನ್ನು ವೈಭವಿಕರಿಸಿ ಮೆರವಣಿಗೆ ಮಾಡುತ್ತಿದ್ದ 12 ಜನರ ವಿರುದ್ಧ ಮುಂಡಗೋಡು ಸಿಪಿಐ ರಂಗನಾಥ ನೀಲಮ್ಮನವರ ಪ್ರಕರಣ ದಾಖಲಿಸಿದ್ದಾರೆ. ಮುಂಡಗೋಡು ಇಂದಿರಾನಗರದ ಫೈರೋಜಖಾನ್ ಖಾನಜಾದೆ, ಮಹಮದ್ ಶಫಿ ಮುಳಗಟ್ಟಿ, ದೇಶಪಾಂಡೆ ನಗರದ ಸಾಹಿದ್ ಮಿಲ್ಟಿವಾಲೆ, ಮಂಜುನಾಥ ಕಾಜಗಾರ, ಕರಿಂಖಾನ್ ಖಾನಜಾದೆ, ಸಂಜು ಹರಿಜನ, ಕಿರಣ ಚೌಹಾಣ, ವಿಶಾಲ ಶೇಟ್, ವಸಂತ ಕೋರವರ, ಮಹ್ಮದ ಜವಡಿ, ಅಮೀರಖಾನ್ ಪಠಾಣ್ ಹಾಗೂ ಸುನೀಲ ಶೆಟ್ಟಿ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಇವರೆಲ್ಲರೂ ಸೇರಿ ಕ್ರಿಮಿನಲ್ ಹಿನ್ನಲೆ ಉಳ್ಳವರನ್ನು ಪರಿಚಯಿಸಿಕೊಂಡು ಅವರನ್ನು ವೈಭವೀಕರಿಸಿ ಮೆರವಣಿಗೆ ಮಾಡುತ್ತಿದ್ದರು. ಕೊಲೆ ಹಾಗೂ ಕೊಲೆ ಯತ್ನದ ಆರೋಪಿಗಳ ಮೆರವಣಿಗೆಯಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಜನರನ್ನು ಹೆದರಿಸುವ ಉದ್ದೇಶ ಹೊಂದಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿರುವುದಾಗಿ ರಮೇಶ ಹಾನಾಪುರ ಅವರು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.