ರೈತರನ್ನು ಬೆದರಿಸಿ ಹಣ ವಸೂಲಿಗೆ ಮುಂದಾಗಿದ್ದ ಯೂಟೂಬ್ ಪತ್ರಕರ್ತನಿಗೆ ಮುಂಡಗೋಡಿನ ಜನ ಧರ್ಮದೇಟು ನೀಡಿದ್ದಾರೆ. ನಂತರ ಆತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಬರೆಸಿ ಬಿಟ್ಟು ಕಳುಹಿಸಿದ್ದಾರೆ.
ಮುಂಡಗೋಡಿನ ಕೆಲ ರೈತರು ಹೊಟ್ಟೆಪಾಡಿಗಾಗಿ ಇಟ್ಟಂಗಿ ತಯಾರಿಸುತ್ತಾರೆ. ಆದರೆ, ಇಟ್ಟಂಗಿ ತಯಾರಿಕೆಗೆ ಅವರು ಅನುಮತಿ ಪಡೆದಿಲ್ಲ. ಹೀಗಾಗಿ ತಹಶೀಲ್ದಾರರು ಈಗಾಗಲೇ ಅನೇಕರಿಗೆ ನೋಟಿಸ್ ನೀಡಿದ್ದು, ಕೆಲ ದಾಸ್ತಾನುಗಳನ್ನು ಧ್ವಂಸ ಮಾಡಿದ್ದಾರೆ.
ತಯಾರಿಸಿದ ಇಟ್ಟಂಗಿ ಧ್ವಂಸವಾಗಿದ್ದರಿoದ ಅಲ್ಲಿನ ರೈತರು ಸಂಕಷ್ಟದಲ್ಲಿದ್ದು, ಈ ನಡುವೆ ಕಾತೂರಿನ ಬಸು ಮನೆಹಾಳ (ಹೆಸರು ಬದಲಿಸಿದೆ) ಎಂಬ ನಕಲಿ ಪತ್ರಕರ್ತನೊಬ್ಬ ಇಟ್ಟಂಗಿ ತಯಾರಕರ ಬೆನ್ನಿಗೆ ಬಿದ್ದಿದ್ದ. ತನಗೆ 25 ಸಾವಿರ ರೂ ಕೊಡವಂತೆ ಆತ ದುಂಬಾಲು ಬಿದ್ದಿದ್ದ. ಅವರನ್ನು ಬೆದರಿಸಿ ಹಣ ಕೀಳುವ ಪ್ರಯತ್ನ ಮಾಡಿದ್ದು, ಆತನ ಮನೆಯೊಳಗೆ ನುಗ್ಗಿದ ಐದಾರು ಜನ ಹಿಗ್ಗಾ-ಮುಗ್ಗ ಥಳಿಸಿದ್ದಾರೆ.
ನಂತರ ಮನೆಯಿಂದ ಹೊರಗೆ ಎಳೆದು ತಂದು ಅಲ್ಲಿಯೂ ಗೂಸಾ ನೀಡಿದ್ದಾರೆ. ಈತ ತನ್ನದೇ ಆದ ಪತ್ರಿಕೆಯೊಂದನ್ನು ನಡೆಸುತ್ತಿದ್ದು, ಅದು ಸರಿಯಾಗಿ ಪ್ರಕಟವಾಗುತ್ತಿರಲಿಲ್ಲ. ಯೂಟೂಬ್ ಚಾನಲ್ವೊಂದನ್ನು ತೆರೆದಿದ್ದು, ಅಲ್ಲಿಯೂ ಯಾವುದೇ ವರದಿ ಪ್ರಸಾರ ಆಗುತ್ತಿರಲಿಲ್ಲ. ಅದಾಗಿಯೂ ಯೂಟೂಬ್ ಮೂಲಕ ಸುದ್ದಿ ಪ್ರಸಾರ ಮಾಡದೇ ಇರಲು ಇಟ್ಟಂಗಿ ತಯಾರಿಸುವ ರೈತರೊಬ್ಬರಿಗೆ 25 ಸಾವಿರ ರೂ ಕೇಳಿದಕ್ಕಾಗಿ ಆತನಿಗೆ ಒದೆ ಬಿದ್ದಿದೆ.
ವಾರದ ಹಿಂದೆ ನಕಲಿ ಪತ್ರಕರ್ತನ ಪುತ್ರನೂ ಪ್ರಕರಣವೊಂದರಲ್ಲಿ ರಂಪಾಟ ನಡೆಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ. ಇದೀಗ ಪೊಲೀಸ್ ಠಾಣೆಯಲ್ಲಿ ಆತ `ಇನ್ಮುಂದೆ ಈ ರೀತಿ ಮಾಡುವುದಿಲ್ಲ’ ಎಂದು ಬರೆದುಕೊಟ್ಟಿದ್ದಾನೆ.