ಯಲ್ಲಾಪುರ: ಕುಂದರ್ಗಿಯ ಗೌಡತಿಕೊಪ್ಪ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ಕಮಲಾಕರ ನಾಯ್ಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತನ ಬಳಿಯಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನ 11ರ ಸಂಜೆ 7.30ಕ್ಕೆ ಕುಂದರ್ಗಿ ಒನಕೆಮನೆಯ ಕಮಲಾಕರ ಬೈರೇಶ್ವರ ನಾಯ್ಕ ಬಸ್ ನಿಲ್ದಾಣದ ಬಳಿ ನಿಂತಿದ್ದ. ಅಲ್ಲಿ ಸಂಚರಿಸುವ ಜನರಿಗೆ ಮಟ್ಕಾ ಆಡುವಂತೆ ಪ್ರೇರೇಪಿಸುತ್ತಿದ್ದ. 1 ರೂಪಾಯಿ ಹೂಡಿಕೆ ಮಾಡಿದ ಅದೃಷ್ಟವಂತರಿಗೆ 80 ರೂ ತಾಗುವುದಾಗಿ ಆತ ಪ್ರಚಾರ ಮಾಡುತ್ತಿದ್ದ. ಪಿಎಸ್ಐ ಸಿದ್ದಪ್ಪ ಗುಡಿ ಆತನ ವರ್ತನೆ ವೀಕ್ಷಿಸಿದ್ದರು. ತಮ್ಮ ತಂಡದೊAದಿಗೆ ದಾಳಿ ನಡೆಸಿ ಮಟ್ಕಾ ಸಲಕರಣೆಗಳ ಜೊತೆ ಕಮಲಾಕರ ನಾಯ್ಕ ಸಂಗ್ರಹಿಸಿದ್ದ 1170ರೂ ಹಣವನ್ನು ವಶಕ್ಕೆ ಪಡೆದರು.
ಪೊಲೀಸರನ್ನು ನೋಡಿ ಹೆದರಿದ ಕಮಲಾಕರ ನಾಯ್ಕ `ತಾನು ಜನರಿಂದ ಸಂಗ್ರಹಿಸಿದ ಎಲ್ಲಾ ಹಣವನ್ನು ಶಿರಸಿ ಬಿಳಲೆಯ ದೇವೇಂದ್ರ ಶೆಟ್ಟಿ’ಗೆ ಕೊಡುವೆ’ ಎಂದು ಬಾಯ್ಬಿಟ್ಟಿದ್ದ. ಮಟ್ಕಾ ಒಡೆಯನ ಹೆಸರು-ವಿಳಾಸ ಪಡೆದ ಪೊಲೀಸರು ದೇವೇಂದ್ರ ಶೆಟ್ಟಿ ವಿರುದ್ಧವೂ ಪ್ರಕರಣ ದಾಖಲಿಸಿದರು. ಪೊಲೀಸ್ ಸಿಬ್ಬಂದಿ ಸಂತೋಷ ರಾತೋಡ್ ಈ ಪ್ರಕರಣ ತನಿಖೆ ನಡೆಸುತ್ತಿದ್ದಾರೆ.