ಕಾರವಾರದ ನಾರಗೇರಿಯಲ್ಲಿರುವ ಯಕ್ಷಗಾನ ಕಲಾವಿದ ಮಾಣೇಶ್ವರ ಗಣಪು ಗೌಡರು ತುಂಡು ಭೂಮಿಯಲ್ಲಿಯೇ ವರ್ಷವಿಡಿ ಭರಪೂರ ಬೆಳೆ ತೆಗೆಯುತ್ತಿದ್ದಾರೆ.
ಗೌಡರ ಮನೆಯಂಗಳದಲ್ಲಿ ಬಗೆ ಬಗೆಯ ತರಕಾರಿ ಗಮನ ಸೆಳೆಯುತ್ತದೆ. ಇದೇ ತರಕಾರಿ ಬೆಳೆ ಗೌಡರ ಬದುಕನ್ನು ಹಸನಾಗಿಸಿದೆ. 20ಗುಂಟೆ ಕೃಷಿಭೂಮಿಯಲ್ಲಿ ಹಲವಾರು ಬಗೆಯ ತರಕಾರಿಗಳನ್ನು ಅವರು ಬೆಳೆದಿದ್ದು, ಎಕರೆಗಟ್ಟಲೆ ಭೂಮಿ ಇದ್ದರೂ ಬಂಜರು ಬಿಡುವ ಕೃಷಿಕರಿಗೆ ಮಾಣೇಶ್ವರ ಗಣಪು ಗೌಡ ಕೃಷಿ ಯೋಗಿಯಂತೆ ಕಾಣುತ್ತಾರೆ. ಇದೇ ಕೃಷಿಭೂಮಿಯನ್ನು ರಂಗಭೂಮಿಯನ್ನಾಗಿಸಿ ಯುವಕರಿಗೆ ಯಕ್ಷಗಾನ ತರಬೇತಿ ನೀಡುವದು ಅವರ ವಿಶೇಷತೆ. ಇನ್ನು ಮಳೆಗಾಲದ ಆರಂಭದಲ್ಲಿ ಹೀರೇಕಾಯಿ, ಬೆಂಡೆಕಾಯಿ, ಪಡವಲಕಾಯಿ, ಸೌತೆಕಾಯಿ, ಮೂಲಂಗಿ ಮೊದಲಾದ ಬೆಳೆ ತೆಗೆಯುತ್ತಾರೆ. ಹೀಗೆ ಬೆಳೆದ ತರಕಾರಿಗಳನ್ನು ನಗರಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಇವರು ಬೆಳೆದ ತರಕಾರಿಗಳಿಗೆ ಬಹು ಬೇಡಿಕೆ ಇರುವದರಿಂದ ಮಾರುಕಟ್ಟೆಗೆ ಬರುವ ಮುನ್ನ ದಾರಿಯಲ್ಲಿಯೇ ವ್ಯಾಪಾರ ನಡೆದ ಉದಾಹರಣೆಗಳಿವೆ.
ಜನವರಿ ತಿಂಗಳಿನಲ್ಲಿ ತೆರಳಿದರೆ ಬದನೆಕಾಯಿ, ಹಸಿ ಮೆಣಸು, ಕೆಂಪು ಹರಿವೆ ಸೊಪ್ಪು, ಹಸಿರು ಹರಿವೆ ಸೊಪ್ಪು, ಹಗಲಕಾಯಿಯಂತಹ ಪಸಲು ಕಾಣಸಿಗುತ್ತದೆ. ಇವುಗಳಿಗೆ ಕೂಡ ಬಾರೀ ಬೇಡಿಕೆ ಇರುವದರಿಂದ ಕೃಷಿ ಕಾಯಕಿಯ ಜೀವನ ನಡೆಯುತ್ತಿದೆ. ಈವರೆಗೆ ಗೌಡರು ರಾಸಾಯನಿಕ ಬಳಸಿ ಕೃಷಿ ಮಾಡಿಲ್ಲ. ದನದ ಸಗಣಿ ಹಾಗೂ ತರಗೆಲೆಗಳ ಗೊಬ್ಬರವನ್ನು ಸಸಿಗಳಿಗೆ ಉಣಿಸುತ್ತಾರೆ. ರಾಸಾಯನಿಕ ಕೀಟನಾಶಕಗಳನ್ನು ಬಳಸದಿರುವದೇ ತಮ್ಮ ಯಶಸ್ಸಿನ ಗುಟ್ಟು ಎಂದು ಅವರು ಸತ್ಯ ಬಿಚ್ಚಿಡುತ್ತಾರೆ. ಕಳೆದ 35 ವರ್ಷಗಳಿಂದ ಇದೇ ಕಸುಬನ್ನಾಗಿಸಿಕೊಂಡಿರುವ ಗೌಡರಿಗೆ ಎಂದಿಗೂ ಆತಂಕ ಎದುರಾಗಿಲ್ಲ. ಕೃಷಿ ಆದಾಯದಿಂದಲೇ ಮನೆ ನಿರ್ಮಿಸಿಕೊಂಡಿದ್ದಾರೆ. ಸಂಸಾರ ನಿಭಾಯಿಸುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ ಕೃಷಿ ತೋಟ ಕಣ್ಣಾಡಿಸದಿದ್ದರೆ ಅವರಿಗೆ ನೆಮ್ಮದಿಯಿಲ್ಲ. ಎಲ್ಲಾ ಕೆಲಸಗಳನ್ನು ಒಬ್ಬರೇ ನಿಭಾಯಿಸುವ ಗೌಡರು ಆಳುಗಳನ್ನು ಇಟ್ಟುಕೊಂಡಿಲ್ಲ.
Discussion about this post